ADVERTISEMENT

ಫ್ಯಾಕ್ಟ್ ಚೆಕ್: ಹರಿದಾಡುತ್ತಿರುವ ಧ್ವನಿ ಅಮಿತಾಭ್‌ರದ್ದಲ್ಲ

ಫ್ಯಾಕ್ಟ್ ಚೆಕ್
Published 26 ನವೆಂಬರ್ 2024, 23:54 IST
Last Updated 26 ನವೆಂಬರ್ 2024, 23:54 IST
..
..   

ಹಿನ್ನೆಲೆ ಧ್ವನಿಯನ್ನು ಒಳಗೊಂಡಿರುವ ಮಾಂಟೇಜ್ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. ‘ಬಾಲಕಿಯರನ್ನು ಕಲ್ಲು ಹೊಡೆದು ಸಾಯಿಸುತ್ತಿರುವ ಈ ದೇಶದಲ್ಲಿ ಮಾನವೀಯತೆ ಎಲ್ಲಿದೆ? ಇಲ್ಲಿ ಭಯೋತ್ಪಾದಕರನ್ನು ಬಹಿರಂಗವಾಗಿ ಬೆಂಬಲಿಸಲಾಗುತ್ತಿದೆ. ಶತ್ರುದೇಶದ ಪರ ಜಿಂದಾಬಾದ್ ಕೂಗಲಾಗುತ್ತಿದೆ. ರಾಮನ ಅಸ್ತಿತ್ವವನ್ನು ಪ್ರಶ್ನಿಸಲಾಗುತ್ತಿದೆ...’ ಮುಂತಾಗಿ ವಿಡಿಯೊದಲ್ಲಿನ ಹಿನ್ನೆಲೆ ಧ್ವನಿ ಹೇಳುತ್ತದೆ. ‘ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ಅಂತಿಮವಾಗಿ ಮೌನ ಮುರಿದಿದ್ದು, ಜನರನ್ನು ಎಚ್ಚರಿಸುವ ಸಲುವಾಗಿ ದೇಶದ ಪ್ರಸ್ತುತ ಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ’ ಎಂದು ವಿಡಿಯೊ ಹಂಚಿಕೊಳ್ಳುತ್ತಿರುವವರು ಪ್ರತಿ‍‍ಪಾದನೆ ಮಾಡುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಅಮಿತಾಭ್ ಅವರ ಧ್ವನಿಗೆ ಇರುವ ಆಳ ವಿಡಿಯೊದಲ್ಲಿನ ಧ್ವನಿಯಲ್ಲಿ ಇಲ್ಲ. ಜತೆಗೆ ವಾಕ್ಯಗಳನ್ನು ಉಚ್ಚರಿಸುವ ರೀತಿ ಕೂಡ ಭಿನ್ನವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಹಿನ್ನೆಲೆ ಧ್ವನಿಯ ಕೊನೆಯಲ್ಲಿ ‘ವಿಡಿಯೊ ಅನ್ನು ಎಲ್ಲರೂ ಶೇರ್ ಮಾಡಿ’ ಎಂದು ಕೇಳಲಾಗಿದೆ. ಇವೆಲ್ಲವನ್ನೂ ಗಮನಿಸಿದರೆ, ವಿಡಿಯೊದಲ್ಲಿರುವುದು ಬಚ್ಚನ್ ಅವರ ಧ್ವನಿ ಅಲ್ಲ ಎನ್ನುವುದು ತಿಳಿಯುತ್ತದೆ. ಜತೆಗೆ, ‘ಇಲೆವೆನ್ ಲ್ಯಾಬ್ಸ್’ನ ಟೆಕ್ಸ್ಟ್ ಟು ಸ್ಪೀಚ್ ಆಯ್ಕೆಯನ್ನು ಬಳಸಿ ಅದೇ ವಾಕ್ಯಗಳನ್ನು ಪ್ಲೇ ಮಾಡಿದಾಗ, ವಿಡಿಯೊದಲ್ಲಿ ಇರುವಂಥದ್ದೇ ಧ್ವನಿ ಕೇಳಿಸಿತು. ಅಂದರೆ, ಇದು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿದ ಧ್ವನಿ ಎನ್ನುವುದು ಖಚಿತವಾಯಿತು. ಈ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT