ADVERTISEMENT

Fact Check | ಟ್ರಂಪ್‌ ಬೆಂಬಲಿಗರು ‘ಮೋದಿ... ಮೋದಿ...’ ಘೋಷಣೆ ಕೂಗಿಲ್ಲ

ಫ್ಯಾಕ್ಟ್ ಚೆಕ್
Published 11 ನವೆಂಬರ್ 2024, 23:58 IST
Last Updated 11 ನವೆಂಬರ್ 2024, 23:58 IST
   

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಡೊನಾಲ್ಡ್‌ ಟ್ರಂಪ್‌ ಅವರು ಭಾಷಣ ಮಾಡಿದ ಸಂದರ್ಭದಲ್ಲಿ ಅವರ ಬೆಂಬಲಿಗರು ‘ಮೋದಿ... ಮೋದಿ...’ ಎಂದು ಘೋಷಣೆ ಕೂಗಿದ್ದಾರೆ ಎಂದು ಹೇಳಿಕೊಳ್ಳುತ್ತಾ ಸಾಮಾಜಿಕ ಜಾಲತಾಣಗಳ ಹಲವು ಬಳಕೆದಾರರು ವಿಡಿಯೊವೊಂದನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ರಾಜ್ಯಸಭಾ ಸದಸ್ಯ, ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯ ವಕ್ತಾರ ಸಮೀಕ್‌ ಭಟ್ಟಾಚಾರ್ಯ ಅವರು ಕೂಡ ಹಂಚಿಕೊಂಡಿದ್ದಾರೆ. ಆದರೆ, ಇದು ಸುಳ್ಳು. 

ವಿಡಿಯೊವನ್ನು ಇನ್‌ವಿಡ್‌ ಟೂಲ್‌ನಲ್ಲಿ ಹಾಕಿದಾಗ ಹಲವು ಕೀಫ್ರೇಮ್‌ಗಳು ಕಂಡು ಬಂದವು. ಅವುಗಳಲ್ಲಿ ಒಂದನ್ನು ಗೂಗಲ್‌ ಲೆನ್ಸ್‌ನಲ್ಲಿ ಹಾಕಿ ಹುಡುಕಾಟ ನಡೆಸಿದಾಗ ನವೆಂಬರ್‌ 6ರಂದು ಯುಟ್ಯೂಬ್‌ನಲ್ಲಿ ‘ಫಾಕ್ಸ್‌ 9 ಮಿನ್ನಿಪೊಲಿಸ್‌–ಸೇಂಟ್‌ಪಾಲ್‌’ ಎಂಬ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಲಾದ ವಿಡಿಯೊ ಸಿಕ್ಕಿತು. ಭಾಷಣದಲ್ಲಿ ಟ್ರಂಪ್‌ ಅವರು ರಾಬರ್ಟ್‌ ಕೆನಡಿ ಜ್ಯೂನಿಯರ್‌ ಅವರ ಹೆಸರು ಪ್ರಸ್ತಾಪಿಸುತ್ತಾರೆ. ಆಗ ಅಲ್ಲಿ ಸೇರಿದ್ದ ಜನರು ಬಾಬಿ... ಬಾಬಿ... (bobby.. bobby) ಎಂದು ಘೋಷಣೆ ಕೂಗುತ್ತಾರೆ. ರಾಬರ್ಟ್‌ ಕೆನಡಿ ಜ್ಯೂನಿಯರ್‌ ಅವರು ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದರು. ಅವರು ನಂತರ ಟ್ರಂಪ್‌ ಅವರನ್ನು ಬೆಂಬಲಿಸಿದ್ದರು. ತಮ್ಮ ಭಾಷಣದಲ್ಲಿ ಕೆನಡಿ ಅವರನ್ನು ‘ಬಾಬಿ’ ಎಂದು ಕರೆದಿದ್ದರು. ಟ್ರಂಪ್‌ ಭಾಷಣದ ಪೂರ್ಣ ಪಾಠ ದಿ ನೈಟ್ಲಿ ವೆಬ್‌ಸೈಟ್‌ನಲ್ಲಿದ್ದು, ಅದರಲ್ಲಿ ಜನರು ‘ಬಾಬಿ.. ಬಾಬಿ..’ ಎಂದು ಘೋಷಣೆ ಕೂಗಿರುವುದರ ಪ್ರಸ್ತಾಪವೂ ಇದೆ ಎಂದು ಪಿಟಿಐ ಫ್ಯಾಕ್ಟ್‌ ಚೆಕ್‌ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT