ADVERTISEMENT

Fact check: ಅನಂತ್‌ ಅಂಬಾನಿ ಬೆಟ್ಟಿಂಗ್‌ ಆ್ಯಪ್‌ ಪರ ಪ್ರಚಾರ ಮಾಡಿಲ್ಲ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 20:31 IST
Last Updated 3 ಜುಲೈ 2024, 20:31 IST
   

ರಿಲಯನ್ಸ್‌ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕೇತರ ನಿರ್ದೇಶಕ ಅನಂತ್‌ ಅಂಬಾನಿ ಅವರು ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ ಪರ ಪ್ರಚಾರ ಮಾಡಿದ್ದಾರೆ ಎನ್ನಲಾದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳ ಹಲವು ಬಳಕೆದಾರರು ಹಂಚಿಕೊಂಡಿದ್ದಾರೆ. ‘ನನ್ನ ಮದುವೆಯ ಗೌರವಾರ್ಥ ದೇಶದ ಜನರಿಗೆ ₹100 ಕೋಟಿ ನೀಡುತ್ತೇನೆ. ನೀವು ನನ್ನ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ನನ್ನ ನೆಚ್ಚಿನ ಆಟ ಆಡಬೇಕು. ನೀವು ಗೆದ್ದ ಹಣದ ಐದು ಪಟ್ಟು ಹಣವನ್ನು ನಾನು ಕೊಡುತ್ತೇನೆ ಮತ್ತು ಸೋತರೆ ನಿಮ್ಮ ಠೇವಣಿಯ ಎರಡು ಪಟ್ಟು ಕೊಡುತ್ತೇನೆ’ ಎಂದು ಅನಂತ್‌ ಅಂಬಾನಿ ಹೇಳುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ ಇದು ಸುಳ್ಳು.

ಈ ವಿಡಿಯೊದ ಸತ್ಯಾಸತ್ಯತೆ ಪರಿಶೀಲಿಸುವಾಗ, ವಿಡಿಯೊದಲ್ಲಿ ಅನಂತ್‌ ಅಂಬಾನಿಯವರ ತುಟಿಯ ಚಲನೆಗೂ, ವಿಡಿಯೊದಲ್ಲಿ ಬರುವ ಧ್ವನಿಗೂ ಹೊಂದಾಣಿಕೆಯಾಗದಿರುವುದು ಕಂಡು ಬಂತು. ಹಾಗಾಗಿ, ಇನ್‌ವಿಡ್‌ ಟೂಲ್‌ ಮೂಲಕ ಶೋಧ ನಡೆಸಿದಾಗ, ವಿಡಿಯೊದಲ್ಲಿ ಹಲವು ಫ್ರೇಮ್‌ಗಳು ಕಂಡು ಬಂದವು. ಒಂದು ಫ್ರೇಮ್‌ ಅನ್ನು ಗೂಗಲ್‌ ಲೆನ್ಸ್‌ ಮೂಲಕ ಶೋಧಿಸಿದಾಗ, ಮಾರ್ಚ್‌ 2ರಂದು ಇಂಡಿಯಾ ಟುಡೆಯಲ್ಲಿ ಪ್ರಸಾರವಾದ ಅನಂತ್‌ ಅಂಬಾನಿಯವರ ಸಂದರ್ಶನದ ವಿಡಿಯೊವನ್ನು ತೋರಿಸಿತು. ಅನಂತ್‌ ಅಂಬಾನಿ ಯಾವುದೇ ಬೆಟ್ಟಿಂಗ್‌ ಆ್ಯಪ್‌ ಪರ ಪ್ರಚಾರ ಮಾಡಿಲ್ಲ. ಅವರ ಸಂದರ್ಶನದ ವಿಡಿಯೊವನ್ನು ತಿರುಚಿ, ಬೇರೆ ಧ್ವನಿಯನ್ನು ಅದಕ್ಕೆ ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ ಎಂದು ಪಿಟಿಐ ಫ್ಯಾಕ್ಟ್‌ ಚೆಕ್‌ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT