ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಜನರು ಸೇರುತ್ತಲೇ ಇಲ್ಲ. ಕುಂಭ ಮೇಳಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೆಲವರು ನಕಲಿ ಚಿತ್ರಗಳನ್ನು ಕುಂಭಮೇಳದ್ದು ಎಂದು ಹಂಚಕೊಳ್ಳುತ್ತಿದ್ದಾರೆ. ನಿಜವಾದ ಸ್ಥಿತಿ ಏನಿದೆ ಎಂಬುದನ್ನು ಇಲ್ಲಿ ನೋಡಿ ಎಂದು ಬಿಜೆಪಿಯ ಪ್ರೀತಿ ಗಾಂಧಿ ಅವರು ವಿಡಿಯೊ ಒಂದನ್ನು ಟ್ವೀಟ್ ಮಾಡಿದ್ದಾರೆ. ಹರಿದ್ವಾರದಲ್ಲಿ ಗಂಗಾ ನದಿಯ ದಂಡೆಯಲ್ಲಿ ಕೆಲವೇ ಸಂತರು ಇರುವ ದೃಶ್ಯ ಆ ವಿಡಿಯೊದಲ್ಲಿ ಇದೆ. ಇದೇ ವಿಡಿಯೊ ಮತ್ತು ವಿವರವನ್ನು ಹಲವರು ಹಂಚಿಕೊಂಡಿದ್ದಾರೆ. ಈವರೆಗೆ ಸಾವಿರಾರು ಸಂಖ್ಯೆಯಲ್ಲಿ ಇದನ್ನು ಮರುಟ್ವೀಟ್ ಮಾಡಲಾಗಿದೆ.
ಈ ಪೋಸ್ಟ್‌ನಲ್ಲಿ ಸತ್ಯವನ್ನು ಮರೆಮಾಚಲಾಗಿದೆ. ಆ ಮೂಲಕ ಜನರ ಹಾದಿ ತಪ್ಪಿಸಲಾಗುತ್ತಿದೆ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ಈ ಟ್ವೀಟ್‌ಗಳಲ್ಲಿ ಇರುವ ವಿಡಿಯೊವನ್ನು ಹರಿದ್ವಾರದಗೇಂಜಸ್ ಪಾರ್ಕ್ ಎಂಬ ಹೋಟೆಲಿನ ಎದುರು ಚಿತ್ರೀಕರಿಸಲಾಗಿದೆ. ‘ವಿಡಿಯೊವನ್ನು ಮಧ್ಯಾಹ್ನ 3ರ ವೇಳೆಯಲ್ಲಿ ಚಿತ್ರೀಕರಿಸಲಾಗಿದೆ. ಆ ವೇಳೆಯಲ್ಲಿ ಅಲ್ಲಿ ಯಾವುದೇ ಆಚರಣೆ ನಡೆಯುವುದಿಲ್ಲ, ಆಗ ಜನರು ಹರ್ ಕಿಪೂರಿ ಎಂಬಲ್ಲಿಗೆ ತೆರಳಿರುತ್ತಾರೆ. ಇಲ್ಲಿ ಸಂಜೆ 7ರ ನಂತರ ಜನ ಸೇರುತ್ತಾರೆ. ಬೆಳಿಗ್ಗೆ 7-8ರವರೆಗೆ ಕಿಕ್ಕಿರಿದು ತುಂಬಿರುತ್ತಾರೆ. ನಂತರ ಇಲ್ಲಿಂದ ಹರ್ ಕಿಪೂರಿಗೆ ತೆರಳುತ್ತಾರೆ. ಹೀಗಾಗಿ ಮಧ್ಯಾಹ್ನದ ವೇಳೆ ಇಲ್ಲಿ ಜನರು ಇರುವುದಿಲ್ಲ’ ಎಂದು ಹೋಟೆಲ್‌ನ ಮಾಲೀಕ ತಿಳಿಸಿದ್ದಾರೆ. ಇದೇ ಸ್ಥಳದಲ್ಲಿ ದೂರದರ್ಶನ ವಾಹಿನಿಯವರು ಸಂಜೆ ಚಿತ್ರೀಕರಿಸಿರುವ ವಿಡಿಯೊದಲ್ಲಿ ಸಾವಿರಾರು ಮಂದಿ ಸೇರಿರುವುದು ದಾಖಲಾಗಿದೆ. ಅವರಲ್ಲಿ ಯಾರೂ ಮಾಸ್ಕ್ ಧರಿಸಿಲ್ಲ ಮತ್ತು ಅಂತರ ಕಾಯ್ದುಕೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.