ADVERTISEMENT

Fact Check : ಮುಸ್ಲಿಂ ಎಂಬ ಕಾರಣಕ್ಕೆ ಸಂಚಾರಿ ಪೊಲೀಸ್‌ ಅಧಿಕಾರಿಗೆ ಬೆದರಿಕೆ?

​ಪ್ರಜಾವಾಣಿ ವಾರ್ತೆ
Published 11 ಮೇ 2023, 18:37 IST
Last Updated 11 ಮೇ 2023, 18:37 IST
   

ರಾಜಸ್ಥಾನದ ಚುರು ಎಂಬಲ್ಲಿ ಸಂಚಾರಿ ಪೊಲೀಸ್‌ ಸಮವಸ್ತ್ರದಲ್ಲಿರುವ ವ್ಯಕ್ತಿಯೊಬ್ಬರು ಅಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಹಿಂದೂ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಮುಸ್ಲಿಂ ಸಮುದಾಯದ ಪೊಲೀಸ್‌ಗೆ ಬೆದರಿಕೆ ಹಾಕಿದ್ದಾರೆ’ ಎಂದು ವಿಡಿಯೊ ಜೊತೆ ಹೇಳಲಾಗಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಪೊಲೀಸರಿಗೇ ಈ ಸ್ಥಿತಿ ಇದ್ದರೆ, ಸಾಮಾನ್ಯ ಜನರ ಪಾಡೇನು ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಈ ಆರೋಪ ಸುಳ್ಳು.

ಸಂಚಾರಿ ಪೊಲೀಸ್ ದಿರಿಸಿನಲ್ಲಿರುವ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬುದು ತಪ್ಪು ಮಾಹಿತಿ ಎಂದು ‘ದಿ ಲಾಜಿಕಲ್ ಇಂಡಿಯನ್‌’ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. ಏ.17ರಂದು ಚುರುವಿನ ರಸ್ತೆಯೊಂದರಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ದಟ್ಟಣೆಗೆ ಕಾರಣವಾಗಿದ್ದ ದುಬಾರಿ ಕಾರನ್ನು ಸ್ಥಳದಿಂದ ತೆಗೆಯುವಂತೆ ಸಂಚಾರಿ ಪೊಲೀಸ್ ಜಗವೀರ್ ಸಿಂಗ್ ಸೂಚಿಸಿದ್ದರು. ಆದರೆ ಕಾರಿನಲ್ಲಿದ್ದ ನರೇಂದ್ರ ಸಿಂಗ್ ಎಂಬಾತ ಬೆದರಿಕೆ ಹಾಕಿದ್ದ. ತನಗೆ ಸಚಿವರು ಆಪ್ತರಾಗಿದ್ದು, ವರ್ಗಾವಣೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದ. ಬೇಸರದಿಂದ ಕಣ್ಣೀರು ಹಾಕಿದ್ದ ಜಗವೀರ್ ಸಿಂಗ್ ಅವರು ಠಾಣೆಗೆ ದೂರು ನೀಡಿದ್ದರು. ನಂತರ ಆರೋಪಿಯನ್ನು ಬಂಧಿಸಲಾಗಿತ್ತು. ಅವರು ಮುಸ್ಲಿಂ ಆಗಿದ್ದರಿಂದ ಬೆದರಿಕೆ ಹಾಕಲಾಗಿತ್ತು ಎಂಬುದು ಸುಳ್ಳು ಸುದ್ದಿ ಎಂದು ‘ದಿ ಲಾಜಿಕಲ್ ಇಂಡಿಯನ್‌’ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT