ಭಾರತವು ಮಾಲ್ದೀವ್ಸ್‌ಗೆ ಸೇರಿದ 28 ದ್ವೀಪಗಳನ್ನು ಇತ್ತೀಚೆಗೆ ಖರೀದಿಸಿದೆ, ಈ ಸಂಬಂಧ ಎರಡು ರಾಷ್ಟ್ರಗಳು ಇತ್ತೀಚೆಗೆ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಹಲವು ಇಂಟರ್‌ನೆಟ್ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಇತ್ತೀಚೆಗೆ ಮಾಲ್ದೀವ್ಸ್‌ಗೆ ಮೂರು ದಿನಗಳ ಭೇಟಿ ನೀಡಿ, ಅಲ್ಲಿನ ಸಮಾರಂಭವೊಂದರಲ್ಲಿ ಭಾಗವಹಿಸಿದ್ದನ್ನು ಪ್ರಸ್ತಾಪಿಸುತ್ತಿದ್ದಾರೆ. ಆದರೆ, ಭಾರತವು ಅಲ್ಲಿನ ದ್ವೀಪಗಳನ್ನು ಖರೀದಿಸಿದೆ ಎಂಬುದು ಸುಳ್ಳು.
ಭಾರತದ ನೆರವಿನಿಂದ 28 ದ್ವೀಪಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ಕುಡಿಯುವ ನೀರು ಮತ್ತು ಚರಂಡಿ ವ್ಯವಸ್ಥೆ ಅಭಿವೃದ್ಧಿ ಯೋಜನೆಯನ್ನು ಇತ್ತೀಚೆಗೆ ಉದ್ಘಾಟಿಸಲಾಗಿತ್ತು. ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾವು ಈ ಯೋಜನೆಗೆ ಆರ್ಥಿಕ ನೆರವು ನೀಡಿದೆ. ಇದೇ ಸಮಾರಂಭವನ್ನು ಮುಂದಿಟ್ಟುಕೊಂಡು ಈ ಭಾರತ ದ್ವೀಪಗಳನ್ನು ಖರೀದಿಸಿದೆ ಎಂದು ಬಲಪಂಥೀಯ ಸಾಮಾಜಿಕ ಜಾಲತಾಣ ಬಳಕೆದಾರರು ಪೋಸ್ಟ್ ಮಾಡುತ್ತಿದ್ದಾರೆ. ಮಾಲ್ದೀವ್ಸ್‌ಗೆ ಜೈಶಂಕರ್ ಅವರು ನೀಡಿರುವ ಭೇಟಿ ಹಾಗೂ ಈ ಸಮಾರಂಭದಲ್ಲಿ ಪಾಲ್ಗೊಂಡಿರುವುದರ ಬಗ್ಗೆ ವಿದೇಶಾಂಗ ವ್ಯವಹಾರಗಳ ಇಲಾಖೆ ಅಧಿಕೃತ ಪತ್ರಿಕಾ ಹೇಳಿಕೆ ನೀಡಿದೆ. ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಬರೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದ ಫ್ಯಾಕ್ಟ್‌ಚೆಕ್ ಘಟಕ ಪಿಐಬಿ ಫ್ಯಾಕ್ಟ್‌ಚೆಕ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿರುವ ಪೋಸ್ಟ್‌ಗಳು ಸುಳ್ಳು ಎಂದು ಹೇಳಿದೆ ಎಂದು ಬೂಮ್ ಫ್ಯಾಕ್ಟ್ ಚೆಕ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.