ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆಬೆಂಬಲಿಸಿ ಕೇರಳದಲ್ಲಿ ಮುಸ್ಲಿಮರುರ‍್ಯಾಲಿ ನಡೆಸಿದ್ದಾರೆ ಎಂಬ ಶೀರ್ಷಿಕೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ರ‍್ಯಾಲಿಯಲ್ಲಿರುವ ಜನರು ಮುಸ್ಲಿಂ ಟೋಪಿ ಧರಿಸಿ ಬಿಜೆಪಿ ಧ್ವಜ ಹಿಡಿದು ಪ್ರಧಾನಿ ನರೇಂದ್ರ ಮೋದಿಗೆ ಜೈಕಾರ ಕೂಗುತ್ತಿರುವುದು ಕಾಣುತ್ತಿದೆ. 1 ನಿಮಿಷ 10 ಸೆಕೆಂಡ್ ಅವಧಿಯ ಈ ವಿಡಿಯೊ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ.
ಕೇರಳದಲ್ಲಿ ಭಾರತೀಯ ಮುಸ್ಲಿಮರು ಸಿಎಎ, ಎನ್‌ಆರ್‌ಸಿಗೆ ಬೆಂಬಲ ಘೋಷಿಸಿ ಮೋದಿ ಜಿಂದಾಬಾದ್ ಎಂಬ ಘೋಷಣೆ ಕೂಗುತ್ತಿದ್ದಾರೆ. ಮಾಧ್ಯಮಗಳು ಇದನ್ನು ತೋರಿಸಲಾರವು. ಹೆಚ್ಚಿನ ಜನರಿಗೆ ಇದನ್ನು ಫಾರ್ವರ್ಡ್ ಮಾಡಿ. ಜೈ ನಮೋ ,ಜೈ ಜೈ ನಮೋ ಎಂಬ ಬರಹದೊಂದಿಗೆ ಈ ವಿಡಿಯೋ ಶೇರ್ ಆಗಿದೆ.
ಫ್ಯಾಕ್ಟ್‌ಚೆಕ್
ಈ ವೈರಲ್ ವಿಡಿಯೊ ಬಗ್ಗೆ ಬೂಮ್‌ಲೈವ್ ಫ್ಯಾಕ್ಟ್‌ಚೆಕ್ ಮಾಡಿದ್ದು ಇದು ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಕೇರಳದಲ್ಲಿ ನಡೆದ ರ‍್ಯಾಲಿಯಲ್ಲ ಎಂದು ಸಾಬೀತು ಮಾಡಿದೆ. ಯಾಕೆಂದರೆ ಇಲ್ಲಿ ಒಂದು ಪಕ್ಷದ ಧ್ವಜ ಮಾತ್ರ ಕಾಣಿಸುತ್ತದೆ. ಅಷ್ಟೇ ಅಲ್ಲದೆ ಇಲ್ಲಿ ಯಾವುದೇ ಪೋಸ್ಟರ್‌ಗಳೂ ಕಾಣುತ್ತಿಲ್ಲ.
ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ ರ‍್ಯಾಲಿಯಲ್ಲಿರುವ ಜನರು ಹಿಂದಿ ಭಾಷೆ ಮಾತನಾಡುವುದು ಕೇಳಿಸುತ್ತದೆ. ಕೇರಳದಲ್ಲಿ ನಡೆಯುವ ರ‍್ಯಾಲಿಯಲ್ಲಿ ಹಿಂದಿ ಭಾಷೆ ಬಳಕೆ ದೂರದ ಮಾತು. ಈ ವಿಡಿಯೊದ ಕೆಲವು ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಮೇ ತಿಂಗಳಲ್ಲಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿರುವ ವಿಡಿಯೊವೊಂದರ ತುಣುಕು ಇದಾಗಿದೆ.
ವಾರಣಾಸಿಯಲ್ಲಿ ನರೇಂದ್ರ ಮೋದಿ ಚುನಾವಣೆ ಗೆದ್ದಾಗ ಉತ್ತರ ಪ್ರದೇಶದಲ್ಲಿ ನಡೆದ ರ‍್ಯಾಲಿಯ ವಿಡಿಯೊ ಇದು. ಉತ್ತರ ಪ್ರದೇಶದಲ್ಲಿ ಮೋದಿ ಗೆಲುವಿಗೆ ಸಂಭ್ರಮಿಸುತ್ತಿರುವ ಮುಸ್ಲಿಂ ಬಾಂಧವರು ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಅಪ್‌ಲೋಡ್ ಆಗಿತ್ತು.
ಇದೇ ವಿಡಿಯೊವನ್ನು 2019 ಮೇ 23ರಂದು ಬಿಜೆಪಿ ಸದಸ್ಯ ಕಪಿಲ್ ಮಿಶ್ರಾ ಅವರು ಟ್ವೀಟಿಸಿದ್ದರು.
ಒಟ್ಟಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಬೆಂಬಲಿಸಿರುವ ರ‍್ಯಾಲಿ ಎಂಬ ಶೀರ್ಷಿಕೆಯೊಂದಿಗೆ ಶೇರ್ ಆಗುತ್ತಿರುವ ಈ ವಿಡಿಯೊ ಕಳೆದ ವರ್ಷ ಚುನಾವಣೆಯಲ್ಲಿಮೋದಿ ಗೆಲುವು ಸಾಧಿಸಿದಾಗ ನಡೆದ ಸಂಭ್ರಮಾಚರಣೆ ವಿಡಿಯೊ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.