ADVERTISEMENT

ಮುಂಬೈ ವಿಮಾನ ನಿಲ್ದಾಣದಲ್ಲಿ ಮೋದಿ- ಹಿಟ್ಲರ್ ಪುಸ್ತಕ: ಫೋಟೊಶಾಪ್ ಚಿತ್ರ ವೈರಲ್

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 15:33 IST
Last Updated 2 ಅಕ್ಟೋಬರ್ 2019, 15:33 IST
   

ನವದೆಹಲಿ: ಮುಂಬೈ ವಿಮಾನ ನಿಲ್ದಾಣದಲ್ಲಿ ಕಂಡ ಚಿತ್ರ ಎಂಬ ಶೀರ್ಷಿಕೆಯೊಂದಿಗೆ ನರೇಂದ್ರ ಮೋದಿಯವರ ಬಗ್ಗೆ ಇರುವ ಪುಸ್ತಕ, ಅದರ ಬಳಿಯಲ್ಲಿಯೇ ನಾಝಿ ನಾಯಕ ಅಡಾಲ್ಫ್ ಹಿಟ್ಲರ್‌ ಕುರಿತು ಇರುವ ಪುಸ್ತಕದ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಶೆಲ್ಫ್‌ನಲ್ಲಿ ಇರುವ ಪುಸ್ತಕಗಳು ಇವು ಎಂದು ಹೇಳುತ್ತಿದ್ದು, ಈ ಪುಸ್ತಕದ ಮಧ್ಯೆ ಮೋದಿ ಪುಸ್ತಕದತ್ತಬಾಣದ ಗುರುತು ನೀಡಿ ನೀವು ಇದನ್ನು ಇಷ್ಟಪಡುವುದಾದರೆ ಇದನ್ನೂ ಓದಿ ಎಂದು ಇನ್ನೊಂದು ಬಾಣದ ಗುರುತು ಹಿಟ್ಲರ್ ಪುಸ್ತಕದತ್ತ ತೋರಿಸುತ್ತದೆ.

ಸೆಪ್ಟೆಂಬರ್ 29ರಂದು ಆಶಿಶ್ ಎಂಬ ಟ್ವೀಟಿಗರು ಈ ಫೋಟೊ ಟ್ವೀಟಿಸಿದ್ದು, 3052 ಮಂದಿ ಇದನ್ನು ಲೈಕ್ ಮಾಡಿದ್ದಾರೆ.

ADVERTISEMENT

ಫ್ಯಾಕ್ಟ್‌ಚೆಕ್
ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಫೋಟೊಶಾಪ್ ಚಿತ್ರ ಎಂಬುದು ಗೊತ್ತಾಗುತ್ತದೆ. ಈ ವೈರಲ್ ಟ್ವೀಟ್‌ ಬಗ್ಗೆ ಆಲ್ಟ್ ‌ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿದೆ.

ಕೃಪೆ: ಆಲ್ಟ್ ನ್ಯೂಸ್

ನರೇಂದ್ರ ಮೋದಿಯ ಚಿತ್ರವಿರುವ ಪುಸ್ತಕವನ್ನು ನೋಡಿದರೆ ಬೇರೊಂದು ಪುಸ್ತಕದ ಮೇಲೆ ನರೇಂದ್ರ ಮೋದಿ ಫೋಟೊವನ್ನು ಅಂಟಿಸಿರುವಂತೆ ಕಾಣಿಸುತ್ತದೆ. ಮೋದಿ ಚಿತ್ರವಿರುವ ಪುಸ್ತಕದ ಎಡಭಾಗದಲ್ಲಿ D ಎಂಬ ಅಕ್ಷರ ಸ್ವಲ್ಪವೇ ಕಾಣಿಸುತ್ತದೆ. ಪುಸ್ತಕ ಇಟ್ಟಿರುವ ಶೆಲ್ಫ್ ಕೆಳಗೆ ಪುಸ್ತಕದ ಬೆಲೆ ವಿದೇಶಿ ಕರೆನ್ಸಿಯಲ್ಲಿದೆ. ಭಾರತದ ಕರೆನ್ಸಿಯಲ್ಲಿಲ್ಲ. ಹಾಗಾಗಿ ಇದು ಮುಂಬೈ ವಿಮಾನ ನಿಲ್ದಾಣದಲ್ಲಿನ ಚಿತ್ರ ಅಲ್ಲ ಎಂಬುದು ಸ್ಪಷ್ಟ.


ಈ ಚಿತ್ರದ ಸತ್ಯಾಸತ್ಯತೆ ಅರಿಯುವುದಕ್ಕಾಗಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಒರಿಜಿನಲ್ ಚಿತ್ರ ಸಿಕ್ಕಿದೆ. ನರೇಂದ್ರ ಮೋದಿಯ ಮುಖಪುಟವಿರುವ ಪುಸ್ತಕದ ಬದಲು ಅಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಖಪುಟವಿರುವ ಪುಸ್ತಕ ಇದೆ. ‘Crippled America- How to Make America Great Again ಎಂಬ ಪುಸ್ತಕ ಇದಾಗಿದ್ದು, ಇದರ ಲೇಖಕ ಡೊನಾಲ್ಡ್ ಟ್ರಂಪ್ ಅವರೇ ಆಗಿದ್ದಾರೆ.

2016ರಲ್ಲಿ The Poke ಟ್ವೀಟ್ ಪ್ರಕಾರ ಈ ಫೋಟೊ ಬುಕ್‌ಶಾಪ್‌ವೊಂದರಲ್ಲಿ ಕ್ಲಿಕ್ಕಿಸಿದ್ದಾಗಿದೆ. ಆದರೆ ಎಲ್ಲಿ ಏನು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.