ADVERTISEMENT

Factcheck: ಬ್ರಿಕ್ಸ್‌ ಸಭೆಯಲ್ಲಿ ಪ್ರಧಾನಿ ಮೋದಿ ಅನುಪಸ್ಥಿತಿ; ಸುಳ್ಳು ಸುದ್ದಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 0:19 IST
Last Updated 1 ನವೆಂಬರ್ 2024, 0:19 IST
<div class="paragraphs"><p>.ಫ್ಯಾಕ್ಟ್‌ಚೆಕ್‌</p></div>

.ಫ್ಯಾಕ್ಟ್‌ಚೆಕ್‌

   

ರಷ್ಯಾದ ಕಜಾನ್‌ನಲ್ಲಿ ಇತ್ತೀಚೆಗೆ ನಡೆದ ಬ್ರಿಕ್ಸ್‌ ರಾಷ್ಟ್ರಗಳ 16ನೇ ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರು ಒಟ್ಟಾಗಿರುವ ಫೋಟೊದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಣಿಸುತ್ತಿಲ್ಲ. 2012ರಲ್ಲಿ ನಡೆದಿದ್ದ ಶೃಂಗಸಭೆಯ ಅಧಿಕೃತ ಗ್ರೂಪ್‌ ಫೋಟೊದಲ್ಲಿ ಅಂದಿನ ಪ್ರಧಾನಿ ಮನಮೋಹನ್‌ಸಿಂಗ್‌ ಅವರು ಕಾಣಿಸಿಕೊಂಡಿದ್ದರು ಎಂದು ಪ್ರತಿಪಾದಿಸುವ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಧಾನಿ ಮೋದಿ ಅವರ ಅನುಪಸ್ಥಿತಿಯನ್ನು ಟೀಕಿಸಿ ಕೇರಳ ಕಾಂಗ್ರೆಸ್‌ ಸೇರಿದಂತೆ ಸಾಮಾಜಿಕ ಬಳಕೆದಾರರು ತಮ್ಮ ‘ಎಕ್ಸ್‌’ ಮತ್ತು ಫೇಸ್‌ಬುಕ್‌ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇದು ಸುಳ್ಳು. 

ಪ್ರಧಾನಿ ಮೋದಿ ಅವರು ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾಕ್ಕೆ ತೆರಳಿದ್ದರು. ಅ.22 ಮತ್ತು 23ರಂದು ಅವರು ಅಲ್ಲಿದ್ದು ಶೃಂಗಸಭೆಯಲ್ಲಿ ಭಾಗವಹಿಸಿದ್ದಲ್ಲದೇ, ಚೀನಾದ ಅಧ್ಯಕ್ಷ ಷಿ ಜಿಂಗ್‌ಪಿಂಗ್‌, ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಸೇರಿದಂತೆ ವಿವಿಧ ರಾಷ್ಟ್ರಗಳ ಮುಖಂಡರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಿದ್ದರು. ಅ.24ರಂದು ಅವರು ಭಾರತಕ್ಕೆ ಮರಳಿದ್ದರು. ಅ.23ರಂದು ತೆಗೆಯಲಾಗಿದ್ದ ಎಲ್ಲ ರಾಷ್ಟ್ರಗಳ ಮುಖಂಡರ ಗ್ರೂಪ್‌ ಫೋಟೊದಲ್ಲಿ ಮೋದಿ ಅವರೂ ಇದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 46 ಸೆಕೆಂಡುಗಳ ವಿಡಿಯೊದಲ್ಲಿರುವ ಫೋಟೊವು ಶೃಂಗಸಭೆಯ ಕೊನೆಯ ದಿನವಾದ 24ರಂದು ತೆಗೆಯಲಾಗಿದ್ದು, ಅಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಪಾಲ್ಗೊಂಡಿದ್ದರು. ವಿಡಿಯೊದಲ್ಲಿದ್ದ ಎಎನ್‌ಐ ಸುದ್ದಿ ಸಂಸ್ಥೆಯ ಲಾಂಛನವನ್ನು ಆಧಾರವಾಗಿಟ್ಟುಕೊಂಡು ಅಂತರಜಾಲದಲ್ಲಿ ಹುಡುಕಾಡಿದಾಗ ಎಎನ್‌ಐ ಸುದ್ದಿ ಸಂಸ್ಥೆ ಈ ಬಗ್ಗೆ ವರದಿ ಮಾಡಿರುವ ಮೂಲ ವಿಡಿಯೊ ಸಿಕ್ಕಿತು. ವಿಡಿಯೊಕ್ಕೆ ನೀಡಲಾದ ಅಡಿಬರಹದಲ್ಲಿ ಎಸ್‌.ಜಯಶಂಕರ್‌ ಅವರು ಭಾಗವಹಿಸಿದ್ದು ಸ್ಪಷ್ಟವಾಗಿ ನಮೂದಿಸಲಾಗಿದೆ ಎಂದು ಬೂಮ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.