ADVERTISEMENT

ಕೇರಳ ಮತ್ತು ತುಮಕೂರಿನ ಕಾಂಗ್ರೆಸ್ ರ‍್ಯಾಲಿಯಲ್ಲಿದ್ದದ್ದು ಪಾಕ್ ಧ್ವಜ ಅಲ್ಲ!

​ಪ್ರಜಾವಾಣಿ ವಾರ್ತೆ
Published 4 ಮೇ 2019, 16:26 IST
Last Updated 4 ಮೇ 2019, 16:26 IST
   

ಬೆಂಗಳೂರು: ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ರ‍್ಯಾಲಿಯಲ್ಲಿ ಕಾರ್ಯಕರ್ತರು ಪಾಕಿಸ್ತಾನದ ಧ್ವಜ ಹಾರಿಸಿದ್ದಾರೆ ಎಂಬ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಹಿಂದೆಯೂ ಇದೇ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿತ್ತು.

ಅರಿವಾಗಲಿ ಗುಲಾಮರಿಗೆ ಎಂಬ ಶೀರ್ಷಿಕೆಯೊಂದಿಗೆ ಕೆಲವು ಫೇಸ್‍ಬುಕ್ ಬಳಕೆದಾರರು ಈ ವಿಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.

ಆದರೆ ವಿಡಿಯೊದಲ್ಲಿರುವುದು ಪಾಕಿಸ್ತಾನದ ಧ್ವಜ ಅಲ್ಲ. ಈ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿದೆ.

ADVERTISEMENT

ಇದು ಪಾಕ್ ಧ್ವಜ ಅಲ್ಲ
2018ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಇದೇ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆ ಹೊತ್ತಲ್ಲಿಯೂ ಇದು ಪಾಕ್ ಧ್ವಜ ಅಲ್ಲ ಎಂಬ ಸುದ್ದಿಯನ್ನು ಆಲ್ಟ್ ನ್ಯೂಸ್ ಪ್ರಕಟಿಸಿತ್ತು. ಈ ವಿಡಿಯೊದಲ್ಲಿಕಾಣಿಸುತ್ತಿರುವ ಹಸಿರು ಬಣ್ಣದ ಧ್ವಜ ಪಾಕಿಸ್ತಾನದ್ದು ಅಲ್ಲ. ಇದು ಕೇರಳದಲ್ಲಿರುವ ರಾಜಕೀಯ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪಕ್ಷದ ಧ್ವಜವಾಗಿದೆ.

ಈ ಕೆಳಗಿನ ಚಿತ್ರ ಗಮನಿಸಿ

ಪಾಕ್ ಧ್ವಜ (ಎಡ) - ಐಯುಎಂಎಲ್ ಪಕ್ಷದ ಧ್ವಜ (ಬಲ)

ಪಾಕ್ ಧ್ವಜದಲ್ಲಿ ಎಡಭಾಗದಲ್ಲಿ ಬಿಳಿ ಬಣ್ಣ, ಹಸಿರು ಬಣ್ಣದಲ್ಲಿ ಅರ್ಧ ಚಂದಿರ ಮತ್ತು ನಕ್ಷತ್ರ ಇದೆ. ಐಯುಎಂಎಲ್ ಧ್ವಜದಲ್ಲಿ ಹಸಿರು ಬಣ್ಣದಲ್ಲಿ ಅರ್ಧ ಚಂದ್ರ ಮತ್ತು ನಕ್ಷತ್ರ ಮಾತ್ರ ಇದೆ. ಈ ವ್ಯತ್ಯಾಸವನ್ನು ಗಮನಿಸಿದರೆ ಪಾಕ್ ಧ್ವಜ ಮತ್ತುಐಯುಎಂಎಲ್ ಧ್ವಜದ ನಡುವಿನ ವ್ಯತ್ಯಾಸ ತಿಳಿಯುತ್ತದೆ.

ಇದೇ ರೀತಿ ಇನ್ನೊಂದು ವಿಡಿಯೊ ಕೂಡಾ ಫೇಸ್‍ಬುಕ್‍ನಲ್ಲಿ ಹರಿದಾಡುತ್ತಿದೆ. ಕೇರಳದಲ್ಲಿ ರಾಹುಲ್ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಕೇಳಿ ವಯನಾಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಕ್ ಧ್ವಜ ಹಿಡಿದು ರ‍್ಯಾಲಿ ನಡೆಸುತ್ತಿದ್ದಾರೆ ಎಂಬ ಶೀರ್ಷಿಕೆಯಲ್ಲಿ ವಿಡಿಯೊ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೊ ನ್ಯೂಸ್ 18 ಕೇರಳ ವಾಹಿನಿಯದ್ದು.ಈ ವಾಹಿನಿಯ ಫೇಸ್‍ಬುಕ್ ಪುಟದಲ್ಲಿ ಆವೇಶತ್ತಿಲುಂ ಆತ್ಮ ವಿಶ್ವಾಸತ್ತಿಲೂಮಾಣ್ ಯುಡಿಎಫ್ ಕ್ಯಾಂಪ್ (ಉತ್ಸಾಹ ಮತ್ತು ಆತ್ಮವಿಶ್ವಾಸದಲ್ಲಿದೆ ಯುಡಿಎಫ್ ಕ್ಯಾಂಪ್) ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಶೇರ್ ಆಗಿದೆ.

ವಯನಾಡಿನಲ್ಲಿ ರಾಹುಲ್ ಗಾಂಧಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹೇಳಿ ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ಇದೆ ಯುಡಿಎಫ್. ರಾಹುಲ್ ಗಾಂಧಿ ಕೇರಳದಿಂದ ಸ್ಪರ್ಧಿಸಿದರೆ, 20 ಲೋಕಸಭಾ ಕ್ಷೇತ್ರಗಳಿಗೂ ಲಾಭವಾಗಲಿದೆ ಎಂಬುದು ಯುಡಿಎಫ್ ಲೆಕ್ಕಾಚಾರ.ಪ್ರಧಾನಿ ಆಕಾಂಕ್ಷಿಯಾಗಿರುವ ಅಭ್ಯರ್ಥಿಯೊಬ್ಬರು ಕೇರಳದಿಂದ ಇದೇ ಮೊದಲ ಬಾರಿ ಚುನಾವಣಾ ಕಣಕ್ಕಿಳಿದಿರುವುದು ವಿಶೇಷ ಅಂತಾರೆ ಕಾಂಗ್ರೆಸ್ ಕಾರ್ಯಕರ್ತರು ಎಂಬ ವಿವರಣೆಯೊಂದಿಗೆ ನ್ಯೂಸ್ 18 ಈ ವಿಡಿಯೊ ಅಪ್‍ಲೋಡ್ ಮಾಡಿದೆ.

ಇದೇ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿರುವ ನೆಟ್ಟಿಗರು, ವಯನಾಡು, ಕೇರಳದಲ್ಲಿ ಜನರು ಪಾಕ್ ಧ್ವಜ ಹಿಡಿದು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಈ ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿರುವುದು ಯಾಕೆ ಎಂಬುದು ನಿಮಗೆ ಗೊತ್ತಾಯ್ತಾ? ಎಂಬ ಸ್ಟೇಟಸ್ ಹಾಕಿ ವಿಡಿಯೊ ಶೇರ್ ಮಾಡಿದ್ದಾರೆ.

ಈ ವಿಡಿಯೊವನ್ನು ಗಮನಿಸಿ.ಇಲ್ಲಿರುವುದು ಕೂಡಾ ಐಯುಎಂಲ್ ಪಕ್ಷದ ಧ್ವಜವೇ ಹೊರತು ಪಾಕ್ ಧ್ವಜ ಅಲ್ಲ. ಕೇರಳದಲ್ಲಿ ಐಯುಎಂಎಲ್ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಹೊಂದಿದೆ. ಹಾಗಾಗಿ ಕಾಂಗ್ರೆಸ್ ಸಂಭ್ರಮಾಚರಣೆಯಲ್ಲಿ ಐಯುಎಂಎಲ್ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.