ADVERTISEMENT

ಹರಿಯಾಣದಲ್ಲಿ 'ಕೈ' ಮೇಲುಗೈ: ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ನಕಲಿ ಸಮೀಕ್ಷೆ

ಫ್ಯಾಕ್ಟ್ ಚೆಕ್
Published 6 ಸೆಪ್ಟೆಂಬರ್ 2024, 10:21 IST
Last Updated 6 ಸೆಪ್ಟೆಂಬರ್ 2024, 10:21 IST
   

ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿ ನಕಲಿ ಸಮೀಕ್ಷೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

90 ಸದಸ್ಯ ಬಲದ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ 35–40 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. 26–36 ಸ್ಥಾನಗಳು ಬಿಜೆಪಿಗೆ ಮತ್ತು 15–20 ಸ್ಥಾನಗಳು ಎಎಪಿ ಪಾಲಾಗಲಿವೆ. ಇತರರಿಗೆ 0–2 ಸ್ಥಾನ ಧಕ್ಕಲಿದೆ ಎಂಬುದಾಗಿ ಸುಳ್ಳು ಮಾಹಿತಿಯುಳ್ಳ ಗ್ರಾಫಿಕ್ಸ್‌ನಲ್ಲಿ ಉಲ್ಲೇಖಿಸಲಾಗಿದೆ.

ರಿಪಬ್ಲಿಕ್‌ ಟಿವಿ–ಮ್ಯಾಟ್ರಿಕ್‌ ಸಮೀಕ್ಷೆ ಮಾಡಿದೆ ಎನ್ನಲಾದ ಚಿತ್ರವನ್ನು ಹಂಚಿಕೊಂಡಿರುವ ಎಎಪಿ ವಕ್ತಾರ ನಿವಾನ್‌ ಶರ್ಮಾ, 'ನಾವು ನೇರವಾಗಿ ಅಧಿಕಾರಕ್ಕೆ ಬರುತ್ತೇವೆ. ಸಮೀಕ್ಷೆಯಲ್ಲಿ ಅಲ್ಲ. ಹರಿಯಾಣ ಜನರ ರಾಜಕೀಯ ತಿಳುವಳಿಕೆಯನ್ನು ಯಾರೂ ಲಘುವಾಗಿ ಪರಿಗಣಿಸಬಾರದು. ಇದು ಅಧಿಕಾರ ಬದಲಾವಣೆಗಾಗಿನ ಹೋರಾಟ' ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಈ ಕುರಿತು 'ಫ್ಯಾಕ್ಟ್‌ಚೆಕ್‌' ನಡೆಸಿರುವ ಪಿಟಿಐ, ರಿಪಬ್ಲಿಕ್‌ ಟಿವಿ ಹಾಗೂ ಮ್ಯಾಟ್ರಿಕ್‌ ಯಾವುದೇ ಸಮೀಕ್ಷೆ ಪ್ರಕಟಿಸಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ವರದಿ ಮಾಡಿದೆ.

ಹರಿದಾಡುತ್ತಿರುವ ಚಿತ್ರ, ಈಟಿವಿ ಭಾರತ್‌ ಮಾಧ್ಯಮವು ಲೋಕಸಭೆ ಚುನಾವಣೆ ಸಂದರ್ಭದಲ್ಲಿ 2024ರ ಜೂನ್‌ 1ರಂದು ಪ್ರಕಟಿಸಿದ್ದ ಚುನಾವಣೋತ್ತರ ಸಮೀಕ್ಷೆಯ ಗ್ರಾಫಿಕ್ಸ್‌ ಆಗಿದೆ. ಅದನ್ನೇ ಎಡಿಟ್‌ ಮಾಡಿ, ರಿಪಬ್ಲಿಕ್‌ ಟಿವಿ ಹಾಗೂ ಮ್ಯಾಟ್ರಿಕ್‌ ಹೆಸರಿನಲ್ಲಿ ಈಗ ಹಂಚಿಕೊಳ್ಳಲಾಗಿದೆ ಎಂದೂ ತಿಳಿಸಿದೆ.

ಹರಿಯಾಣ ವಿಧಾನಸಭೆಗೆ ಅಕ್ಟೋಬರ್‌ 5ರಂದು ಮತದಾನ ನಡೆಯಲಿದೆ. 8ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.