ADVERTISEMENT

ಬಾಲಾಕೋಟ್ ವಾಯುದಾಳಿಯ ದಾಖಲೆ ಎಂದು ವಾಹಿನಿಗಳು ಪ್ರಸಾರ ಮಾಡಿದ್ದು ಹಳೇ ವಿಡಿಯೊ!

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 14:59 IST
Last Updated 19 ಮಾರ್ಚ್ 2019, 14:59 IST
   

ಬೆಂಗಳೂರು:'200 ಉಗ್ರರು ಸತ್ತಿದ್ದಾರೆ ಎಂದು ಪಾಕಿಸ್ತಾನ ಸೇನಾಪಡೆ ಹೇಳಿದೆ'. 'ವಾಯುದಾಳಿಯ ನಂತರ ಹತರಾದ ಉಗ್ರರ ಮೃತದೇಹವನ್ನು ಬೇರೆಡೆಗೆ ಒಯ್ಯಲಾಗಿದೆ'.'ಐಎಎಫ್ ಬಾಲಾಕೋಟ್ ವಾಯುದಾಳಿಯ ದಾಖಲೆ ಇಲ್ಲಿದೆ'.ಅಮೆರಿಕ ಮೂಲದ ಗಿಲ್ಗಿಟ್ ಕಾರ್ಯಕರ್ತ ಈ ವಿಡಿಯೊ ಶೇರ್ ಮಾಡಿದ್ದಾರೆ- ಮಾರ್ಚ್ 13ರಂದು ಭಾರತದ ಸುದ್ದಿವಾಹಿನಿಗಳಲ್ಲಿ ಪ್ರಸಾರವಾದ ಸುದ್ದಿ- ವಿಶೇಷ ಕಾರ್ಯಕ್ರಮಗಳ ಶೀರ್ಷಿಕೆ ಹೀಗಿತ್ತು.

ಎಎನ್‍ಐ, ನ್ಯೂಸ್ 18 , ಇಂಡಿಯಾ ಟುಡೇ, ಎಬಿಪಿ ನ್ಯೂಸ್, ಟೈಮ್ಸ್ ನೌ, ದೈನಿಕ್ ಭಾಸ್ಕರ್, ದೈನಿಕ್ ಜಾಗ್ರಣ್, ಇಂಡಿಯಾ ಟೀವಿ ಮತ್ತು ಜೀ ನ್ಯೂಸ್‍- ಈ ಸುದ್ದಿಗೆ ಸಾಕ್ಷ್ಯ ನೀಡುವ ವಿಡಿಯೊವೊಂದನ್ನು ಪ್ರಸಾರ ಮಾಡಿದ್ದವು.ಫೆಬ್ರುವರಿ 26ರಂದು ಭಾರತದ ವಾಯುಪಡೆಬಾಲಾಕೋಟ್‍ನಲ್ಲಿ ನಡೆಸಿದ ವಾಯುದಾಳಿಯಲ್ಲಿ 200 ಪಾಕಿಸ್ತಾನಿ ಉಗ್ರರು ಹತರಾಗಿದ್ದಾರೆ ಎಂದು ಪಾಕಿಸ್ತಾನದ ಸೇನೆ ಒಪ್ಪಿಕೊಂಡಿದೆ ಎಂದು ಪ್ರತಿಪಾದಿಸುತ್ತಿರುವ ವಿಡಿಯೊ ಆದಾಗಿತ್ತು.ಆದರೆ ಈ ವಿಡಿಯೊದ ಸತ್ಯಾಸತ್ಯತೆಯನ್ನು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿ ವರದಿ ಮಾಡಿದೆ.

ಮೇಲಿರುವ ಈ ಸುದ್ದಿಗಳ ಶೀರ್ಷಿಕೆ ನೋಡಿ. ಈ ಸುದ್ದಿಯ ಮೂಲ ಯಾವುದೇ ಸುದ್ದಿ ಸಂಸ್ಥೆ ಅಲ್ಲ.ಈ ಸುದ್ದಿಯ ಮೂಲ ಅಮೆರಿಕ ಮೂಲದ ಗಿಲ್ಗಿಟ್ಕಾರ್ಯಕರ್ತ ಸೆಂಗೆ ಹನ್ಸಾನ್ಸೆರಿಂಗ್ ಆಗಿದ್ದಾರೆ.ಈ ವಿಡಿಯೊದ ಬಗ್ಗೆ ಸೆರಿಂಗ್ ಅವರು, ಈ ವಿಡಿಯೊದ ವಿಶ್ವಾಸರ್ಹತೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.ಆದರೆ ಬಾಲಾಕೋಟ್‍ನಲ್ಲಿ ನಡೆದಿರುವ ಘಟನೆ ಬಗ್ಗೆ ಪ್ರಮುಖ ವಿಷಯವನ್ನು ಪಾಕಿಸ್ತಾನ ಬಚ್ಚಿಟ್ಟುಕೊಂಡಿರುವಂತೆ ಕಾಣುತ್ತದೆ ಎಂದಿರುವುದಾಗಿ ಹೇಳಿದ್ದಾರೆ ಎಂದು ಎಎನ್‍ಐ ವರದಿ ಮಾಡಿತ್ತು.

ADVERTISEMENT

ಎಲ್ಲರಿಗಿಂತಲೂ ಮೊದಲು ವಿಡಿಯೊ ತೋರಿಸಿ ಸುದ್ದಿ ಪ್ರಸಾರ ಮಾಡಿದ್ದ ಜೀ ನ್ಯೂಸ್, ಬಾಲಾಕೋಟ್ ವಾಯುದಾಳಿಯ ವಿಡಿಯೊ ಎಂದು ಬಿಂಬಿಸುತ್ತಿರುವ ವೈರಲ್ ವಿಡಿಯೊ 6 ವರ್ಷಗಳ ಹಿಂದಿನ ವಿಡಿಯೊ ಎಂದು ತಿದ್ದಿಕೊಂಡಿತು.

ಪಾಕಿಸ್ತಾನದ ಸೇನೆಯ ಸಿಬ್ಬಂದಿ ಏನು ಹೇಳಿದ್ದಾರೆ ಎಂಬುದರ ಬಗ್ಗೆOpIndia ಸುದ್ದಿಯೊಂದನ್ನು ಪ್ರಕಟಿಸಿತ್ತು.

ಫ್ಯಾಕ್ಟ್ ಚೆಕ್

1. ಆಡಿಯೋ

ಈ ವೈರಲ್ ವಿಡಿಯೊದಲ್ಲಿ 0.50ನೇ ಸೆಕೆಂಡ್‍ನಲ್ಲಿ ಬರುವ ದೃಶ್ಯ ನೋಡಿ.ಅಲ್ಲಿ ಪಾಕಿಸ್ತಾನದ ಸೇನಾಧಿಕಾರಿಯೊಬ್ಬರು ಮಗುವನ್ನು ಸಂತೈಸುತ್ತಿದ್ದಾರೆ. ಹಿನ್ನೆಲೆಯಲ್ಲಿ ಕೇಳುತ್ತಿರುವ ದನಿ ಗಮನಿಸಿ.ಇಂಥಾ ಭಾಗ್ಯ ದೇವರಿಗೆ ಪ್ರಿಯರಾದ ಕೆಲವೇ ಕೆಲವರಿಗೆ ಮಾತ್ರ ಸಿಗುತ್ತದೆ. 200 ಮಂದಿ ಮೇಲೆ ಹೋಗಿದ್ದಾರೆ ಎಂಬುದು ನಿನಗೆ ಗೊತ್ತೇ? ಹುತಾತ್ಮನಾಗುವುದು ಆತನ ವಿಧಿ ಆಗಿತ್ತು.ನಾವು ದಿನಾ ಹತ್ತುತ್ತೇವೆ, ಇಳಿಯುತ್ತೇವೆ.ಅವನು ದೇವರಿಗೆ ಪ್ರಿಯನಾಗಿದ್ದ. ಅದು ದೇವರ ಕೃಪೆ,ಬೇಸರಿಸಬೇಡ. ನಿಮ್ಮ ಅಪ್ಪ ಸತ್ತಿಲ್ಲ, ಅವರು ಬದುಕಿದ್ದಾರೆ, ಅವರು ಸತ್ತಿದ್ದಾರೆ ಎಂದು ನೀನು ಹೇಳಬಾರದು.

ಈ ಮಾತುಗಳಲ್ಲಿನ ಕೆಲವು ಅಂಶ ಗಮನಿಸಿ. 200 ಮಂದಿ ಮೇಲೆ ಹೋಗಿದ್ದಾರೆ.ಇಲ್ಲಿ ಹೇಳಿರುವುದು ಮೇಲೆ ಹೋಗಿದ್ದಾರೆ ಎಂದರೆ ಸ್ವರ್ಗ ಪ್ರಾಪ್ತಿಯಾಗಿದೆ ಎಂದಲ್ಲ.ಇಲ್ಲಿ ಮೇಲೆ ಎಂದು ಹೇಳಿದ್ದು ಬೆಟ್ಟದ ಮೇಲೆ, ಯಾಕೆಂದರೆ ಮುಂದಿನ ಸಾಲಿನಲ್ಲಿ 'ನಾವು ದಿನಾ ಹತ್ತುತ್ತೇವೆ ಇಳಿದು ಮರಳುತ್ತೇವೆ' ಎಂದು ಇದೆ.

2. ಆದ್ದರಿಂದ ಇಲ್ಲಿ ಹೇಳುತ್ತಿರುವುದು ಬೆಟ್ಟದ ಮೇಲೆ ಹೋಗಿದ್ದ 200 ಮಂದಿಯ ಬಗ್ಗೆ.ಈ 200 ಮಂದಿಯಲ್ಲಿ ಒಬ್ಬ ಮಾತ್ರ ಮೇಲೆ ಹೋದವನು ಮರಳಿ ಬಂದಿಲ್ಲ,

ಮುಂದಿನ ಸಾಲಿನಲ್ಲಿ ಚಿಂತಿಸಬೇಡ, ನಿನ್ನ ಅಪ್ಪ ಸತ್ತಿಲ್ಲ, ಆತ ಬದುಕಿದ್ದಾನೆ. ಆತ ಸತ್ತಿದ್ದಾನೆ ಎಂದು ಹೇಳಬೇಡ, ಇಲ್ಲಿ ಮಗುವಿನ ಅಪ್ಪ ಸತ್ತಿದ್ದಾನೆ. ಆ ಬಗ್ಗೆ ಮಾತನಾಡುತ್ತಿದ್ದಾರೆ.

ಮಗುವನ್ನು ಎತ್ತಿಕೊಂಡಿರುವ ಸೇನಾಧಿಕಾರಿ ಇಲ್ಲಿ ಏನೂ ಮಾತನಾಡಿಲ್ಲ. ಹಾಗಾಗಿ ಕ್ಯಾಮೆರಾದ ಹಿಂದಿರುವ ವ್ಯಕ್ತಿಯೊಬ್ಬರು ಮಾತನಾಡುತ್ತಿದ್ದಾರೆ. ಹೀಗೆ ಮಾತನಾಡುತ್ತಿರುವವರು ಯಾರು ಎಂಬುದು ಗೊತ್ತಿಲ್ಲ.

2. ಗೂಗಲ್ ರಿವರ್ಸ್ ಇಮೇಜ್ ಸರ್ಚ್


ಈ ವಿಡಿಯೊದಲ್ಲಿನ ಕೆಲವೊಂದು ಫ್ರೇಮ್‍ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಇದೇ ಘಟನೆಯ ಬಗ್ಗೆ ಒಂದಷ್ಟು ಫೇಸ್‍ಬುಕ್ ಪೋಸ್ಟ್ ಸಿಕ್ಕಿದೆ.

ಮೊದಲ ಚಿತ್ರ


ಈ ಫೋಟೊ,ವಿಡಿಯೊದ 0.27ನೇ ಸೆಕೆಂಡ್‍ನಲ್ಲಿ ಕಾಣುವ ಚಿತ್ರವಾಗಿದೆ.


ವಿಡಿಯೊ ಫ್ರೇಮ್ ನಲ್ಲಿರುವ ಮತ್ತು ಬಲಭಾಗದಲ್ಲಿರುವ ಈ ಚಿತ್ರವನ್ನು ನೋಡಿದರೆ ಇವು ಎರಡೂ ಒಂದೇ ಎಂದು ಣುತ್ತದೆ.ಪಾಕಿಸ್ತಾದ ಸೇನಾಧಿಕಾರಿಯ ನೇಮ್ ಪ್ಲೇಟ್‍ನಲ್ಲಿ ಫೈಸಲ್ ಎಂಬ ಹೆಸರಿದೆ.

ಎರಡನೇ ಚಿತ್ರ


ಇದರಲ್ಲಿಯೂ ಪಾಕ್ ಸೇನಾಧಿಕಾರಿ ಫೈಸಲ್ ಹೆಸರಿದೆ. ಕೆಳಗಿರುವ ಈ ಎರಡು ಚಿತ್ರಗಳನ್ನು ನೋಡಿದರೆ ಅವರ ಮುಖದಲ್ಲಿನ ಸಾಮ್ಯತೆ ಕಾಣುತ್ತದೆ.



ಮೂರನೇ ಚಿತ್ರ


ಇಲ್ಲಿ ಸೇನಾಧಿಕಾರಿ ಮೃತದೇಹವೊಂದಕ್ಕೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.ಕೆಳಗೆ ನೀಡಿರುವ ಎರಡೂ ಫೋಟೊಗಳನ್ನು ನೋಡಿ.ಅಲ್ಲಿ ಪಕ್ಕದಲ್ಲಿರುವ ವ್ಯಕ್ತಿಯ ಉಡುಗೆ ಗಮನಿಸಿ, ಅಂದರೆ ಈ ಎರಡೂ ಚಿತ್ರಗಳು ಒಂದೇ ಘಟನೆಯದ್ದಾಗಿದೆ.

ಈ ಫೋಟೊಗಳು ಎಲ್ಲವೂ ವೈರಲ್ ವಿಡಿಯೊದಲ್ಲಿನ ದೃಶ್ಯಗಳಾಗಿವೆ.ಇಲ್ಲಿ ಸೇನಾಧಿಕಾರಿ ಫೈಸಲ್ ಚಿತ್ರ ಸ್ಪಷ್ಟವಾಗಿ ಕಾಣಿಸುತ್ತಿದೆ, ಅಂದರೆ ಇಲ್ಲಿರುವ ಮೃತದೇಹ ಆ ಬಾಲಕನ ತಂದೆಯದ್ದಾಗಿದೆ.

ಪಾಕ್ ಯೋಧರ ಅಂತ್ಯ ಕ್ರಿಯೆ?


ಈ ವಿಡಿಯೊದಲ್ಲಿ ವ್ಯಕ್ತಿಯೊಬ್ಬರ ಅಂತ್ಯ ಕ್ರಿಯೆಯ ದೃಶ್ಯವಿದೆ. ಇಲ್ಲಿಯೂ ಪಾಕ್ ಸೇನಾಧಿಕಾರಿ ಫೈಸಲ್ ಕಾಣಿಸುತ್ತಿದ್ದಾರೆ.

ಪಾಕಿಸ್ತಾನದ ಫೇಸ್‍ಬುಕ್ ಪುಟದಲ್ಲಿ ಅಪ್‍ಲೋಡ್ ಆಗಿರುವ ವಿಡಿಯೊವೊಂದರಲ್ಲಿ ಮೃತದೇಹದ ಮುಖ ಕಾಣಿಸುತ್ತದೆ.ಮಾರ್ಚ್ 1 ರಂದು ಅಂತಿಮ ಕ್ರಿಯೆ ನಡೆದಿದೆ ಎಂದು ಇಲ್ಲಿ ಬರೆಯಲಾಗಿದೆ.

ವಿಡಿಯೊದ 1.09ನೇ ನಿಮಿಷದಲ್ಲಿ ಪಾಕಿಸ್ತಾನದ ಯೋಧರು ವ್ಯಕ್ತಿಯೊಬ್ಬನನ್ನು ದಫನ ಮಾಡುತ್ತಿರುವ ದೃಶ್ಯವಿದೆ.


ಅದರಲ್ಲಿ ಮೃತದೇಹಕ್ಕೆ ಹೂವಿನ ಹಾರ ಅರ್ಪಿಸಿದ್ದು, ಅದರಲ್ಲಿ GOC 21 ARTY DIV ಎಂದು ಬರೆದಿದೆ.ಇತ್ತೀಚೆಗೆ ಮೃತರಾದ ಯೋಧ/ವ್ಯಕ್ತಿಯೊಬ್ಬರ ಅಂತ್ಯ ಕ್ರಿಯೆಯ ವಿಡಿಯೊ ಇದಾಗಿದೆ.

ಇದು ಬಾಲಾಕೋಟ್ ಅಲ್ಲ


ಈ ವಿಡಿಯೊ ಮತ್ತು ಫೋಟೊಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ವ್ಯಕ್ತಿಯೊಬ್ಬರ ಅಂತ್ಯ ಸಂಸ್ಕಾರದ ವಿಡಿಯೊ ಎಂಬುದು ಗೊತ್ತಾಗುತ್ತದೆ. ಇದರ ಹಿನ್ನೆಲೆಯಲ್ಲಿ ದಪ್ಪ ಮಂಜು ಕಾಣಿಸುತ್ತದೆ.ಬಾಲಾಕೋಟ್ ವಾಯುದಾಳಿ ಬಗ್ಗೆ ಹೇಳುವುದಾದರೆ ದಾಳಿ ನಡೆದದ್ದು ಫೆಬ್ರುವರಿ 26ರಂದು.ಆ ದಿನದ ಹವಾಮಾನ ವರದಿ ನೋಡಿದರೆ, ಅಲ್ಲಿ ಹಿಮ ಬೀಳುತ್ತಿರಲಿಲ್ಲ.


ಫೆಬ್ರುವರಿ ಕೊನೆಯ ವಾರದಲ್ಲಿ ಬಾಲಾಕೋಟ್‍ನಲ್ಲಿ ಉಷ್ಣಾಂಶ ಮೈನಸ್ 5 ಡಿಗ್ರಿ ಸೆಲ್ಶಿಯಸ್‍ಗಿಂತ ಕೆಳಗಿಳಿದಿಲ್ಲ.ಈ ಉಷ್ಣಾಂಶಕ್ಕೆ ಹಿಮ ಬೀಳುವುದೇ ಆಗಿದ್ದರೂ ಇಷ್ಟೊಂದು ದಪ್ಪ ಪದರದಲ್ಲಿ ಹಿಮ ಇರಲು ಸಾಧ್ಯವಿಲ್ಲ .

ಬಾಲಾಕೋಟ್‍ನ ಗ್ರೌಂಡ್ ರಿಪೋರ್ಟ್ ನೋಡಿದರೆ ವಾಯುದಾಳಿ ನಡೆದ ಸ್ಥಳದಲ್ಲಿ ಹಿಮಬಿದ್ದಿಲ್ಲ, ಫೆ. 28ರಂದು ರಾಯಿಟರ್ಸ್ ಸಂಸ್ಥೆಯ ಫೋಟೊ ಜರ್ನಲಿಸ್ಟ್ ತೆಗೆದ ಫೋಟೊ ಇದಾಗಿದ್ದು, ಇದರಲ್ಲಿ ಹಿಮದ ಯಾವುದೇ ಕುರುಹು ಕೂಡಾ ಇಲ್ಲ.

ಒಟ್ಟಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಆ ವೈರಲ್ ವಿಡಿಯೊ ಬಾಲಾಕೋಟ್ ವಾಯುದಾಳಿಯದ್ದು ಅಲ್ಲ.ಈ ವಾಯುದಾಳಿಯಲ್ಲಿ 200 ಮಂದಿ ಉಗ್ರರು ಹತರಾಗಿದ್ದಾರೆ ಎಂದು ಪಾಕ್ ಸೇನೆ ಒಪ್ಪಿಕೊಂಡಿದೆ ಎಂದು ಹೇಳುವ ವಿಡಿಯೊ ಕೂಡಾ ಇದಾಗಿಲ್ಲ. ವಿಡಿಯೊದಲ್ಲಿ ಪಾಕ್ ಸೇನಾ ಸಿಬ್ಬಂದಿ ಒಬ್ಬ ವ್ಯಕ್ತಿ ಸಾವಿಗೀಡಾಗಿರುವ ಬಗ್ಗೆ ಮಾತ್ರ ಹೇಳುತ್ತಾರೆ. ಇತ್ತ ಭಾರತದ ಸುದ್ದಿ ವಾಹಿನಿಗಳು ಅಧಿಕೃತವಲ್ಲದ ಈ ವಿಡಿಯೊವನ್ನು ಬ್ರೇಕಿಂಗ್ ನ್ಯೂಸ್ ಎಂದು ಪ್ರಸಾರ ಮಾಡಿರುವುದು ದುರದೃಷ್ಟಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.