ADVERTISEMENT

Fact Check: ಹಿಂದೂ ಬಾಲಕನನ್ನು ಕೇರಳ ಪೊಲೀಸರು ವಶಕ್ಕೆ ಪಡೆದಿಲ್ಲ

ಫ್ಯಾಕ್ಟ್ ಚೆಕ್
Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
   

‘ಕೇರಳದಲ್ಲಿ ಹಿಂದೂಗಳ ಸ್ಥಿತಿಯು ದಯನೀಯವಾಗಿದೆ. ಅವರು ಹಿಂದೂ ಮಕ್ಕಳನ್ನೂ ಬಿಡುತ್ತಿಲ್ಲ’. ‘ಕೇರಳದ ಹಿಂದೂಗಳ ಗೋಳು ನೋಡಿ, ಸರ್ಕಾರಿ ಅಧಿಕಾರಿಗಳು ಭಕ್ತರನ್ನು ಪೊಲೀಸ್‌ ವಾಹನದಲ್ಲಿ ತುಂಬಲಾಗುತ್ತಿದೆ. ಅವರು ಹಿಂದೂ ಮಕ್ಕಳನ್ನೂ ಬಿಡದೆ ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ’ ಎಂಬಂಥ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಾಲಕನೊಬ್ಬ ವಾಹನದ ಒಳಗೆ ಇರುವ ಮತ್ತು ಆತ ಅಳುತ್ತಿರುವ ಫೋಟೊವನ್ನು ಪೋಸ್ಟ್‌ನೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ತಪ್ಪು ಮಾಹಿತಿಗಳೊಂದಿಗೆ ಹಂಚಿಕೆಯಾಗುತ್ತಿರುವ ಸುದ್ದಿಯಾಗಿದೆ.

ಇತ್ತೀಚೆಗೆ ಕೇರಳದ ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡಿತ್ತು. ಒಬ್ಬ ಬಾಲಕ ಉಸಿರುಗಟ್ಟಿ ಮೃತಪಟ್ಟ ಘಟನೆಯೂ ನಡೆಯಿತು. ಫೋಟೊದಲ್ಲಿ ಇರುವ ಬಾಲಕ ತನ್ನ ತಂದೆಯೊಂದಿಗೆ ಶಬರಿಮಲೆಗೆ ಭೇಟಿ ನೀಡಿದ್ದ. ಜನಸಂದಣಿಯಲ್ಲಿ ತಂದೆಯಿಂದ ಆತ ತಪ್ಪಿಸಿಕೊಂಡು ಕೇರಳ ಸಾರಿಗೆ ವಾಹನ ಹತ್ತಿದ್ದ. ಈ ವೇಳೆ ಆತ ಪೋಲೀಸರಿಗೆ ಕೈಮುಗಿದು ತಂದೆಯೊಂದಿಗೆ ಕಳುಹಿಸಿಕೊಡಲು ಬೇಡಿಕೊಂಡಿದ್ದ. ನಂತರ, ತಂದೆಯೊಂದಿಗೆ ಬಾಲಕನ್ನು ಪೊಲೀಸರು ಸೇರಿಸಿದ್ದಾರೆ. ಈ ಬಗ್ಗೆ ಹಲವು ಸುದ್ದಿ ಸಂಸ್ಥೆಗಳು ವಿಡಿಯೊ ಸಹಿತ ವರದಿ ಮಾಡಿದ್ದವು. ಜೊತೆಗೆ, ಕೇರಳ ಪೊಲೀಸರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಬಾಲಕನನ್ನು ನಾವು ವಶಕ್ಕೆ ಪಡೆದಿರಲಿಲ್ಲ ಎಂದಿದ್ದಾರೆ. ಆದ್ದರಿಂದ, ಹಿಂದೂ ಬಾಲಕರನ್ನೂ ಕೇರಳ ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ ಎನ್ನುವುದು ಸುಳ್ಳು ಸುದ್ದಿ ಎಂದು ಬೂಮ್‌ಲೈವ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT