‘ಏಳು ದಿನಗಳ ಒಳಗಾಗಿ ದೇಶ ತೊರೆಯುವಂತೆ ಬಾಂಗ್ಲಾದೇಶದ ಮುಸ್ಲಿಂ ವ್ಯಕ್ತಿಯೊಬ್ಬರು ಅಲ್ಲಿನ ಹಿಂದೂಗಳಿಗೆ ಬೆದರಿಕೆ ಒಡ್ಡಿದ್ದಾರೆ’ ಎಂದು ಹೇಳಿಕೊಂಡು ಹಲವರು ವಿಡಿಯೊ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಾದ ‘ಎಕ್ಸ್’, ‘ಫೇಸ್‌ಬುಕ್‘ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ನಿಜವಲ್ಲ.
ವಿಡಿಯೊ ತುಣುಕನ್ನು ಇನ್‌ವಿಡ್ ಟೂಲ್‌ಗೆ ಹಾಕಿ ಶೋಧ ನಡೆಸಿದಾಗ ಹಲವು ಕೀ ಫ್ರೇಮ್‌ಗಳು ಕಂಡು ಬಂದವು. ಒಂದು ಕೀ ಫ್ರೇಮ್ ಅನ್ನು ಗೂಗಲ್ ಲೆನ್ಸ್ ಮೂಲಕ ಹುಡುಕಾಡಿದಾಗ, ಇದೇ ರೀತಿಯ ವಿಡಿಯೊವನ್ನು ಸೆ.28ರಂದು ಮಹಮ್ಮದ್ ಜುನೈದ್ ಅಬ್ದುಲ್ಲಾ ಎಂಬವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು ಸಿಕ್ಕಿತು. ಬಾಂಗ್ಲಾ ದೇಶದಲ್ಲಿ ಜುಲೈನಲ್ಲಿ ನಡೆದಿದ್ದ ಜನರ ದಂಗೆಯಲ್ಲಿ ಮೃತಪಟ್ಟವರ ಮತ್ತು ಹೋರಾಟ ಮಾಡಿದವರ ಕುಟುಂಬಗಳಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಸೈಫುದ್ದೀನ್ ಮೊಹಮ್ಮದ್ ಎಮ್ದಾದ್ ಎಂಬವರು ಮಾಡಿದ ಭಾಷಣದ ತುಣುಕು ಅದು.
ಅಲ್ಲದೇ, ಈ ವಿಡಿಯೊ ತುಣುಕಿಗೆ ಸಂಬಂಧಿಸಿದಂತೆ ಅ.4ರಂದು ಬಾಬು ಅಹ್ಮದ್ ಎಂವರು ಇದೇ ರೀತಿಯ ಸ್ಪಷ್ಟನೆ ನೀಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಕೂಡ ಮಾಡಿದ್ದರು. ‘ದೇಶವನ್ನು ಏಳು ದಿನಗಳ ಒಳಗೆ ತೊರೆಯಬೇಕು ಎಂದು ಹಿಂದೂಗಳಿಗೆ ಗಡುವು ನೀಡಲಾಗಿದೆ ಎಂಬುದು ಸುಳ್ಳು. ಆ ಭಾಷಣವು ಶೇಖ್ ಹಸೀನಾ, ಅವರ ಪಕ್ಷ ಮತ್ತು ಅವರ ಬೆಂಬಲಿಗರಿಗೆ ಸಂಬಂಧಿಸಿದ್ದಾಗಿದೆ’ ಎಂದು ಪೋಸ್ಟ್‌ನಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.