ADVERTISEMENT

Fact Check: ಜಗನ್‌ ತೀರ್ಥವನ್ನು ಕೆಳಗೆ ಚೆಲ್ಲಿದ್ದಾರೆ ಎಂಬುವುದು ಸುಳ್ಳು ಸುದ್ದಿ

ಫ್ಯಾಕ್ಟ್ ಚೆಕ್
Published 1 ಅಕ್ಟೋಬರ್ 2024, 23:30 IST
Last Updated 1 ಅಕ್ಟೋಬರ್ 2024, 23:30 IST
..
..   

ಆಂಧ್ರಪ್ರದೇಶದ ಆಡಳಿತಾರೂಢ ತೆಲುಗು ದೇಶಂ ಪಕ್ಷವು (ಟಿಡಿಪಿ) ‘ಎಕ್ಸ್‌’ನಲ್ಲಿ ಮಾಜಿ ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್ ರೆಡ್ಡಿ ಅವರ ವಿಡಿಯೊ ಹಂಚಿಕೊಂಡಿದೆ. ಅದನ್ನು ಟಿಡಿಪಿ ಬೆಂಬಲಿಗರು ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ‘ದೇವರ ಪೂಜೆಯ ನಂತರ ನೀಡುವ ತೀರ್ಥ ಪ್ರಸಾದವನ್ನು ಜಗನ್ ಅವರು ಸೇವನೆ ಮಾಡಿಲ್ಲ. ಸೇವನೆ ಮಾಡಿದಂತೆ ನಟನೆ ಮಾಡಿ ತೀರ್ಥವನ್ನು ಕೆಳಗೆ ಚೆಲ್ಲಿದ್ದಾರೆ’ ಎಂದು ವಿಡಿಯೊ ಮೂಲಕ ಟಿಡಿಪಿ ಪ್ರತಿಪಾದನೆ ಮಾಡುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.

18 ಸೆಕೆಂಡ್‌ಗಳ ವಿಡಿಯೊದಲ್ಲಿ ದೃಶ್ಯಗಳನ್ನು ಮೂರು ಬಾರಿ ಪುನರಾವರ್ತನೆ ಮಾಡಲಾಗಿದೆ. ಅದೇ ವಿಡಿಯೊದಲ್ಲಿ ಜಗನ್ ಅವರ ಪತ್ನಿ ತೀರ್ಥ ಪ್ರಸಾದ ಸೇವನೆ ಮಾಡಿರುವ ದೃಶ್ಯಗಳೂ ಇವೆ. ವಿಡಿಯೊ ಅನ್ನು ಕೀವರ್ಡ್ ಸರ್ಚ್‌ಗೆ ಒಳಪಡಿಸಿದಾಗ, ಜನವರಿ 14, 2024ರಂದು ತೆಲುಗಿನ ‘ಸಾಕ್ಷಿ’ ಸುದ್ದಿವಾಹಿನಿಯಲ್ಲಿ ಆ ವಿಡಿಯೊ ಪ್ರಸಾರವಾಗಿರುವುದು ಕಂಡುಬಂತು. ದೀರ್ಘವಾದ ವಿಡಿಯೊದಲ್ಲಿ ಜಗನ್ ತೀರ್ಥ ಪ್ರಸಾದ ಸೇವನೆ ಮಾಡಿರುವುದು ಕಂಡುಬರುತ್ತದೆ. ಅದನ್ನು ತಿರುಚಿ ಬಳಸಿಕೊಂಡು ಜಗನ್ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಈ ಬಗ್ಗೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಕೂಡ ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ‘ಟಿಡಿಪಿ ವಿಡಿಯೊ ಎಡಿಟ್ ಮಾಡಿ ಸುಳ್ಳು ‍ಪ್ರತಿಪಾದನೆ ಮಾಡುತ್ತಿದೆ’ ಎಂದಿದೆ. ಈ ಬಗ್ಗೆ ಬೂಮ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT