ADVERTISEMENT

Factcheck: ಪಾಕ್ ಜನರು 'ಕಾಶ್ಮೀರ ಬೇಡ, ಕೊಹ್ಲಿ ಕಳುಹಿಸಿ' ಎಂದು ಬೇಡಿಕೆ ಇಟ್ಟರೇ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2022, 14:22 IST
Last Updated 28 ಅಕ್ಟೋಬರ್ 2022, 14:22 IST
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಚಿತ್ರ ಹಾಗೂ ವಿರಾಟ್‌ ಕೊಹ್ಲಿ
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಚಿತ್ರ ಹಾಗೂ ವಿರಾಟ್‌ ಕೊಹ್ಲಿ   

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ ತಂಡಗಳು ಈ ಬಾರಿಯ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ತಾವಾಡಿದ ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗಿದ್ದವು. ಅಕ್ಟೋಬರ್‌ 23ರಂದು ಮೆಲ್ಬರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿಯ ಅಮೋಘ ಬ್ಯಾಟಿಂಗ್‌ ಬಲದಿಂದ ಭಾರತ ತಂಡ 4 ವಿಕೆಟ್ ಅಂತರದ ರೋಚಕ ಜಯ ಸಾಧಿಸಿತ್ತು.

ಪಂದ್ಯದ ಬಳಿಕ ಕೊಹ್ಲಿಯ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.

ಇದರ ನಡುವೆ, ಪಾಕಿಸ್ತಾನದ ಜನರು ಕಾಶ್ಮೀರದ ಬದಲು ಕೊಹ್ಲಿಗಾಗಿ ಬೇಡಿಕೆ ಇಡುತ್ತಿದ್ದಾರೆ ಎಂದು ಬಿಂಬಿಸುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.ಪಾಕಿಸ್ತಾನದಧ್ವಜ ಹಾಗೂ ಹಸಿರು ಬಣ್ಣದ ಬ್ಯಾನರ್‌ ಹಿಡಿದುಕೊಂಡಿರುವ ಜನರ ಗುಂಪೊಂದು ಆ ಚಿತ್ರದಲ್ಲಿದೆ. ಆ ಬ್ಯಾನರ್‌ನಲ್ಲಿ, 'ನಮಗೆ ಕಾಶ್ಮೀರ ಬೇಡ. ಕೊಹ್ಲಿಯನ್ನು ಕಳುಹಿಸಿಕೊಡಿ' ಎಂದು ಬರೆದಿರುವಂತೆ ಕಾಣುತ್ತದೆ.

ಈ ಚಿತ್ರವನ್ನು ಹಂಚಿಕೊಂಡಿರುವನಿವೃತ ಸೇನಾಧಿಕಾರಿ ವಿನೋದ್ ಭಾಟಿಯಾ, 'ಈ ರೀತಿ ಎಲ್ಲವನ್ನೂ ಕೇಳುವ ಅಭ್ಯಾಸದಿಂದ, ನೀವು ಏನನ್ನೂ ಪಡೆಯಲಾರಿರಿ' ಎಂದು ಕುಟುಕಿದ್ದಾರೆ.

ಲೇಖಕಿ ಭಾವನಾ ಅರೋರ ಎನ್ನುವವರು, 'ಕಾಶ್ಮೀರವೂ ನಮ್ಮದೇ, ಕೊಹ್ಲಿಯೂ ನಮ್ಮವರೇ' ಎಂದು ಬರೆದುಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿ ನಾಯಕ ಕಮ್ರಾನ್‌ ಅಲಿ ಮಿರ್ ಎನ್ನುವವರೂ ಈ ಫೋಟೊ ಹಂಚಿಕೊಂಡು, ನಮಗೆ ಕಾಶ್ಮೀರ ಬೇಡ. ಕೊಹ್ಲಿಯನ್ನು ಕೊಡಿ ಎಂದು ಬರೆದುಕೊಂಡಿದ್ದಾರೆ. ಹೀಗೆಯೇ ಇನ್ನಷ್ಟು ಮಂದಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.

ನಿಜವೇ?
ಈ ಚಿತ್ರ ನಿಜವೇ ಎಂಬ ಬಗ್ಗೆ ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ಚೆಕ್‌ ಮಾಡಿದೆ. ಇದು 2016ರಲ್ಲಿ 'ಇಂಡಿಯಾ ಟುಡೇ' ಲೇಖನದಲ್ಲಿ ಪ್ರಕಟವಾಗಿದ್ದ ಚಿತ್ರವಾಗಿದೆ.ಕಾಶ್ಮೀರಿ ಯುವಕರು ಪಾಕಿಸ್ತಾನದ ಧ್ವಜ ಹಾಗೂ ಬ್ಯಾನರ್‌ ಹಿಡಿದು,ಆ ದೇಶದ ಪರ ಘೋಷಣೆಗಳನ್ನು ಕೂಗಿದ್ದರು. ಹಿಜ್ಬುಲ್‌ ಮುಜಾಹಿದ್ದೀನ್‌ ನಾಯಕ ಬರ್ಹಾನ್‌ ವಾನಿ ಮತ್ತು ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಗಿಲಾನಿಯನ್ನು ಬೆಂಬಲಿಸಿ ಆಜಾದಿ ಘೋಷಣೆಗಳನ್ನೂ ಕೂಗಿದ್ದರು ಎಂದು ಆಲ್ಟ್‌ನ್ಯೂಸ್‌ ವರದಿ ಮಾಡಿದೆ.

ಕಾಶ್ಮೀರಿ ಯುವಕರು ಹಿಡಿದಿರುವ ಹಸಿರು ಬಣ್ಣದ ಬ್ಯಾನರ್‌ನಲ್ಲಿ, 'ನಮಗೆ ಸ್ವಾತಂತ್ರ್ಯ ಬೇಕು' (We want Azaadi) ಎಂದು ಬರೆದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆದರೆ, ಆ ಚಿತ್ರವನ್ನು ಎಡಿಟ್‌ ಮಾಡಲಾಗಿದೆ. 'ನಮಗೆ ಸ್ವಾತಂತ್ರ್ಯ ಬೇಕು' ಎಂಬ ಅಕ್ಷರಗಳು ಇರುವ ಜಾಗದಲ್ಲಿ 'ನಮಗೆ ಕಾಶ್ಮೀರ ಬೇಡ. ಕೊಹ್ಲಿಯನ್ನು ಕಳುಹಿಸಿಕೊಡಿ' ಎಂದು ಸೇರಿಸಲಾಗಿದೆ. ಈ ಚಿತ್ರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಚಿತ್ರ2018 ಹಾಗೂ 2019ರಲ್ಲಿಯೂ ಕೊಹ್ಲಿ ವಿಚಾರವಾಗಿಯೇ ಎಲ್ಲೆಡೆ ಹರಿದಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.