ADVERTISEMENT

1988ರಲ್ಲಿ ಡಿಜಿಟಲ್ ಕ್ಯಾಮೆರಾ ಮತ್ತು ಇಮೇಲ್ ಸೇವೆ ಭಾರತದಲ್ಲಿತ್ತೇ?

​ಪ್ರಜಾವಾಣಿ ವಾರ್ತೆ
Published 16 ಮೇ 2019, 4:03 IST
Last Updated 16 ಮೇ 2019, 4:03 IST
   

ಬೆಂಗಳೂರು: 80ರ ದಶಕದಲ್ಲಿ ನಾನು ಡಿಜಿಟಲ್ ಕ್ಯಾಮೆರಾ ಮತ್ತು ಇಮೇಲ್ ಬಳಸಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ನ್ಯೂಸ್ ನೇಷನ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.ಮೋದಿ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗಿದ್ದು ಮಾತ್ರವಲ್ಲದೆ ಭಾರತದಲ್ಲಿ ಡಿಜಿಟಲ್ ಕ್ಯಾಮೆರಾ, ಇಮೇಲ್ ಬಳಕೆ ಬಗ್ಗೆ ಚರ್ಚೆಯೂ ನಡೆಯಿತು.

1988ರಲ್ಲಿ ಡಿಜಿಟಲ್ ಕ್ಯಾಮೆರಾ ಮತ್ತು ಇಮೇಲ್ ಸೇವೆ ಭಾರತದಲ್ಲಿ ಇರಲಿಲ್ಲ. ಡಿಜಿಟಲ್ ಕ್ಯಾಮೆರಾ ಭಾರತದಲ್ಲಿ ಲಭ್ಯವಾಗಿದ್ದು 1990ರಲ್ಲಿ. ಇಮೇಲ್ ಸೇವೆ ಭಾರತದಲ್ಲಿ ಚಾಲ್ತಿಗೆ ಬಂದಿದ್ದು 1995ರಲ್ಲಿ. ಹೀಗಿರುವಾಗ 1988ರಲ್ಲಿ ಮೋದಿ ಡಿಜಿಟಲ್ ಕ್ಯಾಮೆರಾದಲ್ಲಿ ಅಡ್ವಾಣಿಯವರ ಫೋಟೊ ಕ್ಲಿಕ್ಕಿಸಿ ಆ ಫೋಟೊವನ್ನು ದೆಹಲಿಗೆ ಇಮೇಲ್ ಮೂಲಕ ಕಳಿಸಿದ್ದು ಹೇಗೆ? ಎಂಬುದು ಸಾಮಾನ್ಯ ಜನರ ಪ್ರಶ್ನೆ.

ಮೋದಿ ಹೇಳಿದ್ದೇನು?
1987- 1988ರಲ್ಲಿ ಗುಜರಾತಿನ ವಿರಂಗಂನಲ್ಲಿ ಎಲ್.ಕೆ. ಅಡ್ವಾಣಿ ಅವರ ಫೋಟೊ ಕ್ಲಿಕ್ಕಿಸಲು ಡಿಜಿಟಲ್ ಕ್ಯಾಮೆರಾ ಬಳಸಿದ್ದೆ. ಈ ಫೋಟೊವನ್ನು ದೆಹಲಿಗೆ ಇಮೇಲ್ ಮಾಡಿದ್ದು ಮರುದಿನ ಪತ್ರಿಕೆಯಲ್ಲಿ ನಾನು ಕ್ಲಿಕ್ಕಿಸಿದ್ದ ಕಲರ್ ಫೋಟೊ ಪ್ರಿಂಟ್ ಆಗಿತ್ತು.ಅದು ನೋಡಿ ಅಡ್ವಾಣಿ ಅವರಿಗೆಅಚ್ಚರಿಯಾಗಿತ್ತು ಎಂದು ಮೋದಿ ಹೇಳಿದ್ದರು.

ADVERTISEMENT

ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ
1988ರಲ್ಲಿ ಡಿಜಿಟಲ್ ಕ್ಯಾಮೆರಾ ಮತ್ತು ಇಮೇಲ್ ಸೇವೆ ಭಾರತದಲ್ಲಿ ಇರಲಿಲ್ಲ ಎಂದು ವಾದಿಸುವವರ ನಡುವೆಯೇ ಇನ್ನು ಕೆಲವು ಡಿಜಿಟಲ್ ಫೋಟೊ ಕ್ಲಿಕ್ಕಿಸುವ ತಂತ್ರಜ್ಞಾನ ಮತ್ತು ಇಮೇಲ್ ಸೇವೆ ಭಾರತದಲ್ಲಿ 1980ಕ್ಕಿಂತ ಮುನ್ನ ಇತ್ತು ಎಂದು ವಾದಿಸಿದ್ದಾರೆ.

ಹಾಗಾದರೆ ಭಾರತದಲ್ಲಿ ಡಿಜಿಟಲ್ ಕ್ಯಾಮೆರಾ ಮತ್ತು ಇ-ಮೇಲ್ ಸೇವೆ ಲಭ್ಯವಾಗಿದ್ದು ಯಾವಾಗ ಎಂಬುದರ ಬಗ್ಗೆ ಬೂಮ್ ಲೈವ್ ಫ್ಯಾಕ್ಟ್‌ಚೆಕ್ ಮಾಡಿದೆ.

1.1988-1989ರಲ್ಲಿ ಮೋದಿ ಡಿಜಿಟಲ್ ಕ್ಯಾಮೆರಾ ಬಳಸಿದ್ದರೇ?
2.ವಿರಂಗಂನಿಂದ ದೆಹಲಿಗೆ ಇಮೇಲ್ ಕಳಿಸಿದ್ದು ಹೇಗೆ? - ಈ ಎರಡು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದಕ್ಕಾಗಿ ಮಾಡಿದ ಫ್ಯಾಕ್ಟ್‌ಚೆಕ್ ಹೀಗಿದೆ.

ಫ್ಯಾಕ್ಟ್‌ಚೆಕ್
ಮೊದಲ ಡಿಜಿಟಲ್ ಕ್ಯಾಮೆರಾ
ನ್ಯೂಯಾರ್ಕ್ ಟೈಮ್ಸ್ ಬ್ಲಾಗ್ ಪ್ರಕಾರಮೊದಲ ಡಿಜಿಟಲ್ ಕ್ಯಾಮೆರಾ ತಯಾರಿಸಿದ್ದು 1975ರಲ್ಲಿ. ಈಸ್ಟ್‌ಮೆನ್ ಕೊಡಾಕ್ ಕಂಪನಿಯಲ್ಲಿ 25ರ ಹರೆಯದ ಸ್ಟೀವನ್ ಸಾಸೋನ್ ಈ ಕ್ಯಾಮೆರಾ ನಿರ್ಮಿಸಿದ್ದರು.110 ಕಲರ್ ನೆಗೆಟಿವ್ ಫಿಲ್ಮ್ ಬಳಕೆಯ ಕಾಲವಾಗಿತ್ತು ಅದು. ಸ್ಟೀವನ್ನಿರ್ಮಿಸಿದ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಫೋಟೊಗಳ ಗುಣಮಟ್ಟ 110 ಕಲರ್ ನೆಗೆಟಿವ್ ಫಿಲ್ಮ್‌ಗೆ ಹೋಲಿಸಿದರೆ ಕಡಿಮೆಯೇ ಆಗಿತ್ತು. ಹಾಗಾಗಿ ಈ ಕ್ಯಾಮೆರಾವನ್ನು ಮಾರುಕಟ್ಟೆಗೆ ಪರಿಚಯಿಸಲಿಲ್ಲ.

ಸ್ಟೀವನ್ ನಿರ್ಮಿಸಿದ ಮೊದಲ ಡಿಜಿಟಲ್ ಕ್ಯಾಮೆರಾ (ಕೃಪೆ:www.flickr.com)

ಸ್ಟೀವನ್ ನಿರ್ಮಿಸಿದ ಮೊದಲ ಡಿಜಿಟಲ್ ಕ್ಯಾಮೆರಾ ಸ್ಮಿತ್ ಸೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಅಮೆರಿಕನ್ ಹಿಸ್ಟರಿಯಲ್ಲಿ ಪ್ರದರ್ಶನಕ್ಕಿಡಲಾಗಿದೆ.

1981ರಲ್ಲಿ ಸೋನಿ ಕಂಪನಿ ಮೊದಲ ಫಿಲ್ಮ್ ರಹಿತ ಕ್ಯಾಮೆರಾ ತಯಾರಿಸುವ ಮೂಲಕ ಕೊಡಾಕ್ ಕಂಪನಿಯನ್ನು ಹಿಂದಿಕ್ಕಿತು. ಸೋನಿ ತಯಾರಿಸಿದ್ದ ಕ್ಯಾಮೆರಾ ಪ್ರೊ ಮವಿಕಾ (Pro Mavica).ಇದು 1987ರಲ್ಲಿ ಮಾರುಕಟ್ಟೆಗೆ ಬಂದಿತ್ತು. ಕೊಡಾಕ್ ಕ್ಯಾಮೆರಾಕ್ಕೆ ಸ್ಪರ್ಧಿಯಾಗಿ ನಿರ್ಮಾಣವಾಗಿದ್ದ ಸೋನಿ ಕಂಪನಿಯ ಮಾವಿಕಾ ಕ್ಯಾಮೆರಾ ಅನಲಾಗ್ ಕ್ಯಾಮೆರಾ ಆಗಿತ್ತು. ಇದರಲ್ಲಿ ಕ್ಲಿಕ್ಕಿಸಿದ ಫೋಟೊಗಳನ್ನು ಎರಡು ಇಂಚಿನ ಫ್ಲಾಪಿ ಡಿಸ್ಕ್‌ನಲ್ಲಿ ಸಂಗ್ರಹಿಸಲಾಗುತ್ತಿತ್ತು.

ಅಂದಹಾಗೆ, ಮೊದಲು ಮಾರುಕಟ್ಟೆಗೆ ಬಂದ ಡಿಜಿಟಲ್ ಕ್ಯಾಮೆರಾ ಫೂಜಿಡಿಎಸ್-ಎಕ್ಸ್ ಮತ್ತು ಕೊಡಾಕ್ ಡಿಸಿಎಸ್ 100 ಆಗಿತ್ತು.
ಫೂಜಿ ಕಂಪನಿಯ R&D ವಿಭಾಗವು 1970ರಲ್ಲಿಯೇ ಡಿಜಿಟಲ್ ಕ್ಯಾಮೆರಾ ನಿರ್ಮಾಣ ರಂಗದಲ್ಲಿತ್ತು.1988ರಲ್ಲಿ ಈ ಕಂಪನಿ ತಮ್ಮ ಮೊದಲ ಡಿಜಿಟಲ್ ಕ್ಯಾಮೆರಾದ ಪ್ರಯೋಗ ಮಾದರಿ DS-1P ಯನ್ನು ತಯಾರಿಸಿತು.ಆದರೆ ಈ ಮಾದರಿಯನ್ನು ಮಾರಾಟಕ್ಕಿಟ್ಟಿರಲಿಲ್ಲ.

ಇದಾಗಿ ಒಂದು ವರ್ಷದ ನಂತರ ಅತ್ಯಾಧುನಿಕ ಟೆಕ್ನಾಲಜಿಯ ಡಿಜಿಟಲ್ ಕ್ಯಾಮೆರಾDS-X ನ್ನು ಪರಿಚಯಿಸಿತು. ಇದು ಮೊದಲ ಬಾರಿ ಮಾರುಕಟ್ಟೆಗೆ ಬಂದದ್ದು ಡಿಸೆಂಬರ್ 1989ರಲ್ಲಿ.ಇದರ ಬೆಲೆ 20,000 ಡಾಲರ್(₹14 ಲಕ್ಷ). ಈಗಿನ ರುಪಾಯಿ ಮೌಲ್ಯಕ್ಕೆ ಹೋಲಿಸಿದರೆ ₹28ಲಕ್ಷ.

ಅದೇ ವರ್ಷ ಅಂದರೆ 1989ರಲ್ಲಿ ಕೊಡಾಕ್ ಕಂಪನಿ ನೂತನ ಮತ್ತು ಅತ್ಯಾಧುನಿಕ ಡಿಜಿಟಲ್ ಕ್ಯಾಮೆರಾವನ್ನು ಪರಿಚಯಿಸಿತು.ಈ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಫೋಟೊ ರೆಸಲ್ಯೂಷನ್ ದಶಲಕ್ಷ ಪಿಕ್ಸೆಲ್‌ಗಿಂತ ಜಾಸ್ತಿಯಾಗಿತ್ತು.
ಮಾಶೇಬಲ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ ಕೊಡಾಕ್ ಕಂಪನಿಯ ನೂತನ ಮಾದರಿ DCS 100 1991ರಲ್ಲಿ ಮಾರುಕಟ್ಟೆಗೆ ಬಂತು.

ಮಾಶೇಬಲ್ ಲೇಖನದಲ್ಲಿ ಹೀಗಿದೆ
ಕೊಡಾಕ್ ಡಿಸಿಎಸ್ (ಡಿಜಿಟಲ್ ಕ್ಯಾಮೆರಾ ಸಿಸ್ಟಂ) 100, 1.3 ಮೆಗಾ ಪಿಕ್ಸೆಲ್ CCD (Charge-coupled device), ನಿಕಾನ್ ಫಿಲ್ಮ್ camera body ಇರುವ ಮೊದಲ ಕಮರ್ಷಿಯಲ್ ಮಾಡೆಲ್ 1991ರಲ್ಲಿ ಮಾರುಕಟ್ಟಗೆ ಬಂತು.ಡಿಜಿಟಲ್ ಕ್ಯಾಮೆರಾಗಳಲ್ಲಿ ಮೊದಲು ಮಾರುಕಟ್ಟೆಗೆ ಬಂದ ಕ್ಯಾಮೆರಾ ಆಗಿದೆ ಡಿಎಸ್‌ಸಿ100. ಆದರೆ ಈ ಕ್ಯಾಮೆರಾವನ್ನು ಶ್ರೀಮಂತ ಪತ್ರಿಕಾ ಛಾಯಾಗ್ರಾಹಕರು ಮಾತ್ರ ಖರೀದಿಸುತ್ತಿದ್ದರು.ಇದರ ಬೆಲೆ $10,000 -$20,000 ಆಗಿತ್ತು.ಮೊದಲ ಗಲ್ಫ್ ಯುದ್ಧದ ವರದಿಗಾರಿಕೆ ಮಾಡಿದ ಪತ್ರಕರ್ತರು11 ಪೌಂಡ್ (4.99 ಕೆಜಿ) ತೂಕದ ಕ್ಯಾಮೆರಾವನ್ನು ಹೊತ್ತು ವರದಿ ಮಾಡಬೇಕಾದ ಅನಿವಾರ್ಯತೆ ಇತ್ತು.

ಮೇಲಿನ ಈ ಅಂಶಗಳಿಂದ ತಿಳಿಯುವುದೇನೆಂದರೆ 1989ರಲ್ಲಿ ಮೋದಿ ಈ ಕ್ಯಾಮೆರಾ ಖರೀದಿಸಿದ್ದರೆ ಅವರು ₹14ಲಕ್ಷಕೊಟ್ಟು ಕ್ಯಾಮೆರಾ ಖರೀದಿಸಿದ್ದಿರಬೇಕು. ಏತನ್ಮಧ್ಯೆ, ಡಿಜಿಟಲ್ ಕ್ಯಾಮೆರಾದಿಂದ ಅಡ್ವಾಣಿ ಅವರ ಫೋಟೊ ಕ್ಲಿಕ್ಕಿಸಿದ್ದೆ ಎಂಬ ಮೋದಿ ಮಾತು ನಂಬಲು ಅಸಾಧ್ಯ.

ಇ-ಮೇಲ್ ಬಳಸಿದ್ದೆ ಅಂದಿದ್ದರು ಮೋದಿ
ನ್ಯೂಸ್ ನೇಷನ್‌ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮೋದಿ ಹೇಳಿದ ಇನ್ನೊಂದು ವಿಷಯ ಇಮೇಲ್ ಬಳಕೆ.1987-1988ರಲ್ಲಿ ಕೆಲವೇ ಕೆಲವು ಮಂದಿಯಷ್ಟೇ ಇಮೇಲ್ ಬಳಸುತ್ತಿದ್ದರು. ನಾನು ಡಿಜಿಟಲ್ ಕ್ಯಾಮೆರಾದಲ್ಲಿ ಅಡ್ವಾಣಿಯವರ ಫೋಟೊ ಕ್ಲಿಕ್ ಮಾಡಿ ಅದನ್ನು ದೆಹಲಿಗೆ ಕಳಿಸಿಕೊಟ್ಟೆ.

ಮೋದಿಯವರ ಈಹೇಳಿಕೆ ಬಗ್ಗೆ ಬೂಮ್ ಟೀಂ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರಲ್ಲಿ ಪ್ರತಿಕ್ರಿಯೆ ಕೇಳಲು ಪ್ರಯತ್ನಿಸಿದ್ದು, ಮಾಳವಿಯಾ ಅದಕ್ಕೆ ಪ್ರತಿಕ್ರಿಯಿಸಿಲ್ಲ.

ಅಡ್ವಾಣಿಯವರ ಫೋಟೊವನ್ನು ತಾನು ಇಮೇಲ್ ಮಾಡಿದ್ದೆ ಎಂದಿದ್ದರು ಮೋದಿ. ಆದರೆ ಭಾರತದಲ್ಲಿ ಇಮೇಲ್ ಸೇವೆ 80ರ ದಶಕದಲ್ಲಿ ಲಭ್ಯವಾಗಿರಲಿಲ್ಲ.

ಅಂದ ಹಾಗೆ ಇಮೇಲ್ ಸೇವೆ 1960ರಲ್ಲಿಯೇ ಇತ್ತು. ಆದರೆ ಈಗ ನಾವು ಬಳಸುವ ಇಂಟರ್ನೆಟ್‌ನ ಸ್ವರೂಪವನ್ನು ಪಡೆದಿರಲಿಲ್ಲ.
1986ರಲ್ಲಿ ಭಾರತದಲ್ಲಿ ಎಡ್ಯುಕೇಶನ್ ಆ್ಯಂಡ್ ರಿಸರ್ಚ್ ನೆಟ್‌ವರ್ಕ್ (ERNET) ಸ್ಥಾಪನೆಯಾಯಿತು. ಭಾರತದಲ್ಲಿ ಮೊದಲು ಇಂಟರ್ನೆಟ್‌ ಬಳಕೆಯಾಗಿದ್ದೇ ಇಲ್ಲಿ.
ಅಂದರೆ ದೇಶದಲ್ಲಿ ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಂನ ಸಹಯೋಗದಿಂದ ಮೊದಲ ಡಯಲ್ ಅಪ್ ನೆಟ್‌ವರ್ಕ್ ಎಂಟು ಸಂಸ್ಥೆಗಳ ನಡುವೆ ಸಂಪರ್ಕ ಸಾಧಿಸಿತು. ಆ ಎಂಟು ಸಂಸ್ಥೆಗಳು- ನ್ಯಾಷನಲ್ ಸೆಂಟರ್ ಫಾರ್ ಸಾಫ್ಟ್‌ವೇರ್ ಟೆಕ್ನಾಲಜಿ ಬಾಂಬೆ, ಇಂಡಿಯನ್ ಇನ್ಸಿಟ್ಯೂಟ್ ಆಫ್ ಸಯನ್ಸ್ ಬೆಂಗಳೂರು. ದೆಹಲಿ, ಬಾಂಬೆ, ಕಾನ್ಪುರ್, ಖರಗ್‌ಪುರ್ ಮತ್ತು ಮದ್ರಾಸ್‍ನಲ್ಲಿರುವ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ). ಡಿಪಾರ್ಟ್‌ಮೆಂಟ್ ಆಫ್ ಇಲೆಕ್ಟ್ರಾನಿಕ್ಸ್ (GOI), ನವದೆಹಲಿ.

ಆಗಸ್ಟ್ 14, 2015ರಲ್ಲಿ ನ್ಯೂಸ್ 18 ಸುದ್ದಿ ಮಾಧ್ಯಮಡಾ. ಶ್ರೀನಿವಾಸನ್ ರಮಣಿ ಅವರು ಬರೆದ NetCh@kra ಪುಸ್ತಕದ ಆಯ್ದ ಭಾಗಗಳನ್ನು ಪ್ರಕಟಿಸಿತ್ತು.ಶ್ರೀನಿವಾಸನ್ ERNET ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು.ಈ ಪುಸ್ತಕದಲ್ಲಿ ಶ್ರೀನಿವಾಸನ್ ಅವರು ಭಾರತದಲ್ಲಿ ಇಲೆಕ್ಟ್ರಾನಿಕ್ ಮೇಲಿಂಗ್ ಮತ್ತು ಇಂಟರ್ನೆಟ್ ಬಗ್ಗೆ ಹೀಗೆ ಬರೆದಿದ್ದಾರೆ.

ಎನ್‌ಸಿಎಸ್‌ಟಿ (National Centre for Software Technology)ಮತ್ತು ಐಐಟಿ ಬಾಂಬೆ ನಡುವೆ ಇಮೇಲ್ ಸಂಪರ್ಕ ಸಾಧಿಸುವುದಕ್ಕಾಗಿ1986ರಲ್ಲಿ ಯುಯುಸಿಪಿ(Unix-to-Unix Copy)ನಲ್ಲಿ ಡಯಲ್ ಅಪ್ ಲಿಂಕ್ ಕಾರ್ಯವೆಸಗಿತು.1987ರಲ್ಲಿ ಐಐಟಿ ಮದ್ರಾಸ್ ಮತ್ತು ಐಐಟಿ ದೆಹಲಿ ಸಂಸ್ಥೆ ಡಯಲ್ ಅಪ್ ಮೂಲಕ ಎನ್‌ಸಿಎಸ್‌ಟಿ VAX 8600 ಜತೆ ಸಂಪರ್ಕ ಸಾಧಿಸಿತು. ಈ ಮೆಷೀನ್‌ನ್ನು ಡಯಲ್ ಅಪ್ ಹಬ್ ಮಾಡಿ, ಅದಕ್ಕೆshakti.ncst.ernet.in ಎಂದು ಹೆಸರಿಡಲಾಯಿತು. ಇದಾದ ಕೂಡಲೇ ಎಲ್ಲ ERNET ಪಾಲುದಾರರುERNET ಡಯಲ್ ಅಪ್ ಇಮೇಲ್ ಬಳಸತೊಡಗಿದರು. ಈ ಸಂಸ್ಥೆಗಳಲ್ಲಿದ್ದ ನೂರರಷ್ಟು ಭಾರತೀಯ ಪ್ರಾಧ್ಯಾಪಕರು ಜಗತ್ತಿನಾದ್ಯಂತವಿರುವ ಸಹೋದ್ಯೋಗಿಗಳ ಜತೆ ಸಂಪರ್ಕ ಸಾಧಿಸಲು ಇಮೇಲ್ ಬಳಸಿದರು.ಎನ್‌ಸಿಎಸ್‌ಟಿಯ ಶಕ್ತಿ ಮತ್ತುಡಯಲ್ ಅಪ್ ಲಿಂಕ್ ಬಳಸಿ ಮತ್ತು ಆಮ್‌ಸ್ಟರ್‌ಡ್ಯಾಮ್ನಲ್ಲಿರುವಸೆಂಟ್ರಮ್ ವೂರ್ ವಿಸ್ಕುಂಡೆ ಇನ್ ಇನ್‌ಫಾರ್ಮೇಟಿಕಾ (ಸಿಡಬ್ಲ್ಯುಐ) ರೂಟರ್ ಸಹಾಯದಿಂದ ಇಮೇಲ್ ಸಂಪರ್ಕ ಸಾಧ್ಯವಾಗಿತ್ತು.
- Netch@kra, Srinivasan Ramani, 2003

1988ರಲ್ಲಿಯೇ ಇಮೇಲ್ ಸೇವೆ ಇತ್ತು ಎಂಬುದು ಶ್ರೀನಿವಾಸ ರಮಣಿಯವರ ಪುಸ್ತಕದಲ್ಲಿ ಹೇಳಿದ್ದರೂ, ಜನಸಾಮಾನ್ಯರಿಗೆ ಇಂಟರ್ನೆಟ್ ಸೇವೆ ಲಭಿಸುವಂತೆ ಮಾಡಿದ್ದು ವಿಎಸ್ಎನ್‌ಎಲ್, 1995ರಲ್ಲಿ. ಈ ಸೇವೆ ಆಗ ಶೈಕ್ಷಣಿಕ ಸಂಪರ್ಕಕ್ಕೆಮಾತ್ರ ಸೀಮಿತವಾಗಿತ್ತು.1995ರ ನಂತರವೇಭಾರತದಲ್ಲಿ ಇಂಟರ್ನೆಟ್ ಚಾಲ್ತಿಗೆ ಬಂದಿದ್ದು,ಜನಸಾಮಾನ್ಯರೂ ಇಮೇಲ್ ಕಳುಹಿಸುವ ಸೌಲಭ್ಯ ದೊರಕಿತು.

ಹಾಗಾಗಿ, 1988ರಲ್ಲಿ ಇಮೇಲ್ ಕಳುಹಿಸಿದ್ದೆ ಎಂದು ಮೋದಿ ಹೇಳುತ್ತಿರುವುದು ಇಲ್ಲಿ ನಂಬುವುದಕ್ಕೆ ಸಾಧ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.