ADVERTISEMENT

Fact Check:ಕಲಬೆರಕೆ ಹಾಲು ಕುಡಿದು ಕ್ಯಾನ್ಸರ್‌ಗೆ ಒಳಗಾಗಿದ್ದಾರೆ ಎಂಬುದು ಸುಳ್ಳು

ಫ್ಯಾಕ್ಟ್ ಚೆಕ್
Published 7 ಅಕ್ಟೋಬರ್ 2024, 23:30 IST
Last Updated 7 ಅಕ್ಟೋಬರ್ 2024, 23:30 IST
   

ಕಲಬೆರಕೆ ಹಾಲನ್ನು ಕುಡಿಯುವುದರಿಂದ ಶೇ 87ರಷ್ಟು ಭಾರತೀಯರು ಕ್ಯಾನ್ಸರ್‌ಗೆ ಒಳಗಾಗುವ ಅಪಾಯ ಎದುರಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದೆ ಎಂದು ಹೇಳಿಕೊಳ್ಳುವ ದಿನಪತ್ರಿಕೆಯೊಂದರ ವರದಿಯನ್ನು ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಖಾತೆಯಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಎಕ್ಸ್‌, ಫೇಸ್‌ಬುಕ್‌ನಲ್ಲಿ ಹಲವರು ಇದನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಪೋಸ್ಟ್‌ನ ಸ್ಕ್ರೀನ್‌ ಶಾಟ್‌ ಅನ್ನು ಗೂಗಲ್‌ ಲೆನ್ಸ್‌ನಲ್ಲಿ ಹಾಕಿ ಹುಡುಕಾಡಿದಾಗ, 2018ರ ಸೆ.20ರಂದು ‘ದೈನಿಕ್‌ ಭಾಸ್ಕರ್‌’ನಲ್ಲಿ ಪ್ರಕಟಗೊಂಡ ವರದಿಯನ್ನು ತೋರಿಸಿತು. ‘ಪ್ರತಿ ದಿನ ನೀವು ಹಾಲಿನ ಬದಲಿಗೆ ವಿಷವನ್ನು ಕುಡಿಯುತ್ತಿದ್ದೀರಿ. ಯಾಕೆಂದರೆ, ದೇಶದಲ್ಲಿ ಮಾರಾಟವಾಗುತ್ತಿರುವ ಶೇ 68.7ರಷ್ಟು ಹಾಲು ನಕಲಿ. ವಿಶ್ವ ಆರೋಗ್ಯ ಸಂಸ್ಥೆಯೂ ಎಚ್ಚರಿಕೆ ನೀಡಿದೆ’ ಎಂದು ವರದಿಯಲ್ಲಿದೆ. ಈ ವರದಿಯನ್ನು ಇಟ್ಟುಕೊಂಡು ಕಸ್ಟಮೈಸ್ಡ್‌ ಕೀ ವರ್ಡ್‌ ಹಾಕಿ ಹುಡುಕಾಟ ನಡೆಸಿದಾಗ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸ್ಕ್ರೀನ್‌ ಶಾಟ್‌ಗೆ ಸಂಬಂಧಿಸಿದ ಸ್ಪಷ್ಟೀಕರಣ ಸಿಕ್ಕಿತು. ಹಾಲು ಕಲಬೆರಕೆಗೆ ಸಂಬಂಧಿಸಿದಂತೆ ಡಬ್ಲ್ಯುಎಚ್‌ಒ ಯಾವುದೇ ಮಾರ್ಗಸೂಚಿ/ಸಲಹೆ ನೀಡಿಲ್ಲ ಎಂದು ಅದರಲ್ಲಿ ಹೇಳಲಾಗಿದೆ. ಅಲ್ಲದೇ, 2019ರ ನವೆಂಬರ್‌ನಲ್ಲಿ ಲೋಕಸಭೆಯಲ್ಲಿ ಅಂದಿನ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್‌ ಅವರು ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ಎಚ್ಚರಿಕೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿರುವ ದಾಖಲೆಯೂ ಸಿಕ್ಕಿದೆ ಎಂದು ಪಿಟಿಐ ಫ್ಯಾಕ್ಟ್‌ ಚೆಕ್‌ ವರದಿ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT