ADVERTISEMENT

Fact Check: ಪಾಕಿಸ್ತಾನದಲ್ಲಿ ನಡೆದ ಘಟನೆಯ ಹಳೇ ವಿಡಿಯೊ ಭಾರತದಲ್ಲಿ ಹಂಚಿಕೆ

ಫ್ಯಾಕ್ಟ್ ಚೆಕ್
Published 9 ಸೆಪ್ಟೆಂಬರ್ 2024, 2:30 IST
Last Updated 9 ಸೆಪ್ಟೆಂಬರ್ 2024, 2:30 IST
   

ಮುಸ್ಲಿಂ ವ್ಯಕ್ತಿಯೊಬ್ಬರು ವಿದ್ಯುತ್‌ ಸರಬರಾಜು ಕಂಪನಿಯ ಸಿಬ್ಬಂದಿಯೊಂದಿಗೆ ಜಗಳವಾಡುತ್ತಿರುವ ವಿಡಿಯೊ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳ ಹಲವು ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಆ ವ್ಯಕ್ತಿಯು ವಿದ್ಯುತ್‌ ಕದಿಯುವುದನ್ನು (ಅಕ್ರಮ ಸಂಪರ್ಕ) ಒಪ್ಪಿಕೊಳ್ಳುತ್ತಿರುವ ಮತ್ತು ಸಂಪರ್ಕ ಕಡಿತಗೊಳಿಸಿದರೆ ಹಿಂಸಾಚಾರ ನಡೆಸುವುದಾಗಿ ಎಚ್ಚರಿಸುವ ದೃಶ್ಯ ವಿಡಿಯೊದಲ್ಲಿದೆ.

ಸಾಮಾಜಿಕ ಜಾಲತಾಣಿಗರೊಬ್ಬರು, ‘ತಾಲಿಬಾನ್‌ ಸಂಸ್ಕೃತಿ ದೇಶದಲ್ಲಿ ಹುಟ್ಟಿದೆ. ಪೊಲೀಸ್‌ ಆಗಿರಲಿ, ಯಾವುದೇ ಇಲಾಖೆಯ ನೌಕರರಾಗಲಿ, ಅವರ ಮುಂದೆ ಬೆಕ್ಕಿನ ರೀತಿ ಆಗಿದ್ದಾರೆ. ಒಂದು ವೇಳೆ ಹಿಂದೂ ವ್ಯಕ್ತಿ ಈ ರೀತಿ ಹೇಳಿದ್ದರೆ, ಸರ್ಕಾರಿ ನೌಕರರು ಆತನಿಗೆ ಸಾಯುವವರೆಗೆ ಹೊಡೆಯುತ್ತಿದ್ದರು’ ಎಂಬ ಒಕ್ಕಣೆಯೊಂದಿಗೆ ವಿಡಿಯೊ ತುಣಕನ್ನು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದರು. ಹಲವರು ಇದೇ ವಿಡಿಯೊ, ಒಕ್ಕಣೆಯನ್ನು ‘ಎಕ್ಸ್‌’, ‘ಫೇಸ್‌ಬುಕ್‌’ನಲ್ಲೂ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಈ ಘಟನೆ ಭಾರತದಲ್ಲಿ ನಡೆದಿಲ್ಲ. ಈ ವಿಡಿಯೊ ಇತ್ತೀಚಿನದ್ದೂ ಅಲ್ಲ.

ಈ ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲನೆಗೆ ಒಳಪಡಿಸಿದಾಗ, ಅದು ನಾಲ್ಕು ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿ ನಡೆದ ಘಟನೆಯ ವಿಡಿಯೊ ಎಂಬ ಸಂಗತಿ ಬೆಳಕಿಗೆ ಬಂತು. ವಿಡಿಯೊವನ್ನು ಇನ್‌ವಿಡ್‌ ಟೂಲ್‌ ಬಳಸಿಕೊಂಡು ಹುಡುಕಿದಾಗ ಹಲವು ಪ್ರಮುಖ ಫ್ರೇಮ್‌ಗಳು ಕಂಡುಬಂದವು. ಮತ್ತಷ್ಟು ಹುಡುಕಿದಾಗ ‘ಟ್ರೆಂಡ್ಸ್‌ ಪಾಕಿಸ್ತಾನ’ ಎಂಬ ಖಾತೆಯಲ್ಲಿ 2020ರ ಜುಲೈ 28ರಂದು ಈ ವಿಡಿಯೊ ಹಂಚಿಕೆಯಾಗಿರುವುದು ತಿಳಿದು ಬಂತು.

ADVERTISEMENT

ನಿರ್ದಿಷ್ಟ ಕೀ ವರ್ಡ್‌ಗಳನ್ನು ಹಾಕಿ ಗೂಗಲ್‌ನಲ್ಲಿ ಹುಡುಕಿದಾಗ ಪಾಕಿಸ್ತಾನದ ನ್ಯೂಸ್‌ ವೆಬ್‌ಸೈಟ್‌ ‘ಸಿಯಾಸತ್‌’ 2020ರ ಜುಲೈ 28ರಂದು ಸುದ್ದಿ ಪ್ರಕಟಿಸಿರುವುದು ಕಂಡು ಬಂತು. ಆ ಸುದ್ದಿಯ ಪ್ರಕಾರ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಈ ವಿಡಿಯೊ ತುಣುಕು ಪಾಕಿಸ್ತಾನದ ಕರಾಚಿಯಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದ್ದಾಗಿದೆ. ಪಾಕಿಸ್ತಾನದ ಅತಿ ದೊಡ್ಡ ವಿದ್ಯುತ್‌ ಸರಬರಾಜು ಕಂಪನಿ ಕೆ–ಎಲೆಕ್ಟ್ರಿಕ್‌, ತನ್ನ ಅಧಿಕೃತ ‘ಎಕ್ಸ್‌’ ಖಾತೆಯಲ್ಲಿ ಈ ವಿಡಿಯೊವನ್ನು ಪೋಸ್ಟ್‌ ಮಾಡಿದೆ. ವಿಡಿಯೊದಲ್ಲಿ ಕಾಣುವ ಎಂಜಿನಿಯರ್‌ ಘಟನೆ ಬಗ್ಗೆ ನೀಡಿರುವ ವಿವರಣೆ ಕೂಡ ಕಂಪನಿ ಮಾಡಿರುವ ಪೋಸ್ಟ್‌ನಲ್ಲಿದೆ ಎಂದು ಪಿಟಿಐ ಫ್ಯಾಕ್ಟ್‌ ಚೆಕ್‌ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.