‘ನೋಡಿ, ಈಕೆ ಕುಲ್ವಿಂದರ್ ಕೌರ್. ಚಂಡೀಗಢ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರನೌತ್‌ನ ಕೆನ್ನೆಗೆ ಬಾರಿಸಿದ ಸಿಐಎಸ್‌ಎಫ್ ಯೋಧೆ’ ಎಂಬ ವಿವರ ಇರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪೋಸ್ಟ್‌ನಲ್ಲಿ ಮಹಿಳೆಯೊಬ್ಬರು ಕಾಂಗ್ರೆಸ್‌ನ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜತೆಗೆ ನಿಂತಿರುವ ಚಿತ್ರವೂ ಇದೆ. ಜತೆಗೆ ಕೆಲವರು, ‘ಪ್ರೀತಿಯ ಅಂಗಡಿಯನ್ನು ತೆರೆಯಲು ಹೊರಟಿರುವವರ ಜತೆ ಕುಲ್ವಿಂದರ್ ಕೌರ್ ಚಿತ್ರ ತೆಗೆಸಿಕೊಂಡಿದ್ದಾರೆ. ಈ ಚಿತ್ರವನ್ನು ನೋಡಿದ ಮೇಲೆ, ಕಂಗನಾ ಮೇಲಿನ ಹಲ್ಲೆಯ ಒಳಹೊರಗುಗಳೆಲ್ಲಾ ಅರ್ಥವಾಗುತ್ತಿವೆ’ ಎಂಬ ವಿವರ ಇರುವ ಪೋಸ್ಟ್‌ಗಳೂ ಹಂಚಿಕೆಯಾಗುತ್ತಿವೆ. ಆದರೆ ಇದು ಸುಳ್ಳು ಸುದ್ದಿ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರದಲ್ಲಿ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಜತೆಗೆ ಇರುವುದು ಕುಲ್ವಿಂದರ್ ಕೌರ್ ಅಲ್ಲ. ಬದಲಿಗೆ ಇವರು ರಾಜಸ್ಥಾನ ಕಾಂಗ್ರೆಸ್‌ನ ನಾಯಕಿ ದಿವ್ಯ ಮಹಿಪಾಲ್ ಮದೇರಣಾ. 2024ರ ಫೆಬ್ರುವರಿ 14ರಂದು ಅವರು ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಆ ವೇಳೆ ಪಕ್ಷದ ನಾಯಕರ ಜತೆಗೆ ತೆಗೆಸಿಕೊಂಡಿದ್ದ ಚಿತ್ರವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈಗ ಅದೇ ಚಿತ್ರವನ್ನು ಸುಳ್ಳು ಸುದ್ದಿ ಹರಡಲು ಬಳಸಿಕೊಳ್ಳಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ದಿವ್ಯ ಅವರು, ‘ನನ್ನ ಚಿತ್ರವನ್ನು ಕುಲ್ವಿಂದರ್ ಕೌರ್ ಅವರ ಚಿತ್ರ ಎಂದು ಹಂಚಿಕೊಳ್ಳುವ ಮೂಲಕ ಸೋನಿಯಾ ಗಾಂಧಿ ಅವರ ಕುಟುಂಬಕ್ಕೆ ಕೆಟ್ಟ ಹೆಸರು ತರಲು ಯತ್ನಿಸಲಾಗುತ್ತಿದೆ. ಇದು ಸುಳ್ಳು ಸುದ್ದಿ. ಇದರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಇದೇ ಜೂನ್ 14ರಂದು ಸ್ಪಷ್ಟನೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.