ADVERTISEMENT

Fact Check |ಇಂಡಿಯಾವನ್ನು ಭಾರತ ಎಂದು ಸಂಬೋಧಿಸುವಂತೆ ಸುಪ್ರಿಂ ಕೋರ್ಟ್‌ ಹೇಳಿಲ್ಲ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2023, 19:30 IST
Last Updated 6 ಸೆಪ್ಟೆಂಬರ್ 2023, 19:30 IST
ಸುಪ್ರಿಂ ಕೋರ್ಟ್‌
ಸುಪ್ರಿಂ ಕೋರ್ಟ್‌    

ಜಿ–20ಯ ಅಧ್ಯಕ್ಷತೆ ವಹಿಸಿರುವ ಭಾರತವು ಸೆ.9 ಮತ್ತು 10ರಂದು ದೆಹಲಿಯಲ್ಲಿ ಶೃಂಗಸಭೆಯನ್ನು ಆಯೋಜಿಸಿದೆ. ಇದರ ಅಂಗವಾಗಿ ಆಯೋಜಿಸಿರುವ ಭೋಜನಕೂಟದ ಆಮಂತ್ರಣ ಪತ್ರಿಕೆಯಲ್ಲಿ ರಾಷ್ಟ್ರಪತಿ ಅವರನ್ನು ‘ಪ್ರೆಸಿಡೆಂಟ್‌ ಆಫ್‌ ಭಾರತ’ ಎಂದು ಸಂಬೋಧಿಸಲಾಗಿದೆ. ಈ ವಿಚಾರವು ದೇಶದಾದ್ಯಂತ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ದೇಶದ ಹೆಸರನ್ನು ಇಂಡಿಯಾದಿಂದ ಭಾರತ ಎಂದು ಬದಲಾಯಿಸಲಾಗುತ್ತದೆ. ಸೆ. 18ರಿಂದ ಕರೆದಿರುವ ವಿಶೇಷ ಅಧಿವೇಶನದಲ್ಲಿಯೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸಲಾಗುತ್ತಿದೆ. ಇಂಥ ಚರ್ಚೆ ನಡೆಯುವ ವೇಳೆಯಲ್ಲಿ ‘2020ರಲ್ಲಿಯೇ ಸುಪ್ರೀಂ ಕೋರ್ಟ್‌ ಇಂಡಿಯಾವನ್ನು ಭಾರತ ಎಂದು ಕರೆಯಲು ಆದೇಶ ನೀಡಿತ್ತು. ಭಾಷೆಯ ಹಂಗಿಲ್ಲದೆ ದೇಶದ ಎಲ್ಲಾ ಭಾಷೆಗಳಲ್ಲೂ ಭಾರತ ಎಂದೇ ದೇಶವನ್ನು ಸಂಬೋಧಿಸಬೇಕು ಎಂದು ನ್ಯಾಯಾಲಯ ಹೇಳಿತ್ತು’ ಎಂಬ ವಾದವನ್ನು ಸಾರ್ವಜನಿಕರು ತಮ್ಮ ಅಭಿಪ್ರಾಯದಲ್ಲಿ ಮುಂದಿಡುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ದೆಹಲಿ ಮೂಲದ ವ್ಯಕ್ತಿಯೊಬ್ಬರು 2020ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತಾರೆ. ಇಂಡಿಯಾದ ಹೆಸರನ್ನು ಭಾರತ ಎಂದು ಮರುನಾಮಕರಣ ಮಾಡಬೇಕು. ಆ ಮೂಲಕ ದೇಶದ ಹೆಸರನ್ನು ಏಕಪ್ರಕಾರವಾಗಿ ಸಂಬೋಧಿಸಲು ಅನುಕೂಲವಾಗಲಿದೆ ಎಂದು ವಾದಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಂದಿನ ಸಿಜೆಐ ಆಗಿದ್ದ ಎಸ್.ಎ. ಬೊಬ್ಡೆ ಅವರು ಈ ಅರ್ಜಿಯನ್ನು ವಜಾ ಮಾಡಿದ್ದರು. ‘ಇಂಡಿಯಾವನ್ನು ಭಾರತ ಎಂದು ಈಗಾಗಲೇ ಕರೆಯಲಾಗುತ್ತಿದೆ. ಜೊತೆಗೆ, ಇಂಡಿಯಾ, ಡಟ್‌ ಈಸ್‌ ಭಾರತ ಎಂದು ಸಂವಿಧಾನದ 1 (1)ನೇ ವಿಧಿಯಲ್ಲಿಯೇ ಹೇಳಲಾಗಿದೆ. ಜೊತೆಗೆ, ದೇಶವನ್ನು ಮರುನಾಮಕರಣ ಮಾಡುವ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ’ ಎಂದು ಅವರು ಹೇಳಿದ್ದರು. ಆದ್ದರಿಂದ, 2020ರಲ್ಲಿ ಸುಪ್ರೀಂ ಕೋರ್ಟ್‌ ಇಂಡಿಯಾವನ್ನು ಭಾರತ ಎಂದು ಕರೆಯುವಂತೆ ಆದೇಶ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT