‘ಇಂಡಿಯಾ ಎಂಬುದರ ಅರ್ಥ, ತೀರಾ ಹಿಂದುಳಿದ, ಹಳೆ ತಲೆಮಾರಿನ, ಮುಟ್ಠಾಳ ಮತ್ತು ಕ್ರಿಮಿನಲ್ ಜನರು’ ಎಂದು ಆಕ್ಸ್‌ಫರ್ಡ್ ಡಿಕ್ಷನರಿಯ 1900ನೇ ಆವೃತ್ತಿಯಲ್ಲಿ ವಿವರಿಸಲಾಗಿದೆ. ಇದು ಬ್ರಿಟಿಷರು ಭಾರತೀಯರಿಗೆ ಕೊಟ್ಟ ಹೆಸರು. ಭಾರತೀಯರನ್ನು ಅವರು ಹೇಗೆ ಕಾಣುತ್ತಿದ್ದರು ಎಂಬುದಕ್ಕೆ ಇಂಡಿಯಾ ಎಂದು ಅವರು ಇಟ್ಟಿರುವ ಹೆಸರೇ ಸಾಕ್ಷಿ. ಅವರು ನಮ್ಮನ್ನು ಗುಲಾಮರಂತೆ ನೋಡುತ್ತಿದ್ದರು. ಅದಕ್ಕೇ ಅಂತಹ ಹೆಸರು ಇಟ್ಟರು’ ಎಂಬ ವಿವರ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜಿ–20 ಶೃಂಗಸಭೆಯ ಭೋಜನಕೂಟಕ್ಕೆ ರಾಷ್ಟ್ರಪತಿ ಭವನವು ನೀಡಿರುವ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಮುದ್ರಿಸಿದ್ದು ಚರ್ಚೆಗೆ ಬಂದ ಬೆನ್ನಲ್ಲೇ ಈ ಸ್ವರೂಪದ ಪೋಸ್ಟ್‌ಗಳು ಹರಿದಾಡುತ್ತಿವೆ. ಆದರೆ, ಈ ಪೋಸ್ಟ್‌ಗಳಲ್ಲಿ ಇರುವ ವಿವರ ಸುಳ್ಳು.
‘ಆನ್‌ಲೈನ್‌ನಲ್ಲಿ ಲಭ್ಯವಿರುವ ಅಧಿಕೃತ ಆಕ್ಸ್‌ಫರ್ಡ್ ಡಿಕ್ಷನರಿಯ ಅತ್ಯಂತ ಹಳೆಯ ಆವೃತ್ತಿ 1913ರದ್ದು. ಆದರೆ ಸುಳ್ಳು ಸುದ್ದಿಯಲ್ಲಿ 1900ರ ಆವೃತ್ತಿಯಲ್ಲಿ ಇದೆ ಎಂದು ಹೇಳಿದ್ದಾರೆ. ಲಭ್ಯವಿರುವ ಆವೃತ್ತಿಯಲ್ಲಿ ಇಂಡಿಯಾ ಮತ್ತು ಇಂಡಿಯನ್ ಎಂಬುದರ ವ್ಯಾಖ್ಯಾನವಿಲ್ಲ. 1934ರ ಆವೃತ್ತಿಯಲ್ಲಿ ಇಂಡಿಯಾ ಎಂಬುದಕ್ಕೆ ಪೂರ್ವ ಏಷ್ಯಾದ, ಸಿಂಧೂನದಿಯಿಂದ ಪೂರ್ವಕ್ಕೆ ಮತ್ತು ಹಿಮಾಲಯದಿಂದ ದಕ್ಷಿಣಕ್ಕೆ ಇರುವ ದೇಶ ಎಂದು ವಿವರಣೆ ನೀಡಲಾಗಿದೆ. ಜತೆಗೆ ಇಂಡಿಯನ್ ಎಂಬುದಕ್ಕೆ ಇಂಡಿಯಾದ ಮೂಲ ನಿವಾಸಿಗಳು ಎಂದು ವಿವರಣೆ ನೀಡಲಾಗಿದೆ. ಹೀಗಾಗಿ ಆಕ್ಸ್‌ಫರ್ಡ್ ಡಿಕ್ಷನರಿಯಲ್ಲಿ ‘ಇಂಡಿಯಾ ಎಂಬುದರ ಅರ್ಥ, ತೀರಾ ಹಿಂದುಳಿದ, ಹಳೆ ತಲೆಮಾರಿನ, ಮುಟ್ಠಾಳ ಮತ್ತು ಕ್ರಿಮಿನಲ್ ಜನರು’ ಎಂದು ವಿವರಣೆ ನೀಡಿದ್ದಾರೆ ಎಂಬುದು ಸುಳ್ಳು ಸುದ್ದಿ’ ಎಂದು ಬೂಮ್‌ಲೈವ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.