ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಬರಾಲ್ ಗ್ರಾಮದ ಸ್ವಾತಂತ್ರ್ಯ ಪೂರ್ವದ ದೇವಾಲಯದ ಹಲವು ದೇವರ ಮೂರ್ತಿಗಳನ್ನು ಜೂನ್ 1ರ ಬೆಳಗಿನ ಜಾವದ ಹೊತ್ತಿಗೆ ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ ಎನ್ನುವ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಅತಿ ವೇಗವಾಗಿ ಹಂಚಿಕೆಯಾಗಿದೆ. ಹಮ್ ಲೋಗ್ ಎನ್ನುವ ಟ್ವಿಟರ್ ಖಾತೆಯು ಚಿತ್ರಸಹಿತವಾಗಿ ಈ ಸುದ್ದಿಯನ್ನು ಮೊದಲು ಹಂಚಿಕೊಂಡಿತ್ತು. ನಂತರ, ‘ಜಿಹಾದಿಗಳೇ ಇದನ್ನು ಮಾಡಿದ್ದಾರೆ’ ಎನ್ನುವಂತೆ ಮತ್ತೊಮ್ಮೆ ಇದೇ ಖಾತೆ ಬರೆದುಕೊಂಡಿತು. ಇದನ್ನು ಸಾವಿರಾರು ಜನರು ಮರು ಟ್ವೀಟ್ ಮಾಡಿದ್ದಾರೆ. ಜೂನ್ 2ರ ನಂತರ ರಾಷ್ಟ್ರ ಮಟ್ಟದ ಹಲವು ಸುದ್ದಿವಾಹಿನಿಗಳು ಪ್ರಸಾರ ಮಾಡಿದವು. ‘ಝೀ ಉತ್ತರ ಪ್ರದೇಶ್ ಉತ್ತರಾಖಂಡ್’ ವಾಹಿನಿಯು ‘ಬುಲಂದ್‌ಶಹರ್‌ದಲ್ಲಿ ಔರಂಗಜೇಬ್ ತರಹದ ಗುಂಪು?’ ಎನ್ನುವ ಚರ್ಚಾ ಕಾರ್ಯಕ್ರಮ ಪ್ರಸಾರ ಮಾಡಿತು. ‘ಆಜ್ ತಕ್’ನ ನಿರೂಪಕ, ಪತ್ರಕರ್ತ ಸುಧೀರ್ ಚೌಧರಿ ಅವರು ತಮ್ಮ ‘ಬ್ಲಾಕ್ ಆ್ಯಂಡ್ ವೈಟ್’ ಕಾರ್ಯಕ್ರಮದಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿದರು. ಘಟನೆ ನಡೆದ ದಿನ ಬರಾಲ್ ಗ್ರಾಮದಲ್ಲಿ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದು ಸುಳ್ಳು ಸುದ್ದಿ.
‘ದೇವರ ವಿಗ್ರಹಗಳನ್ನು ಧ್ವಂಸ ಮಾಡಿದವರು ನಾಲ್ವರು ಹಿಂದೂಗಳು. ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾರೆ’ ಎಂದು ಬುಲಂದ್‌ಶಹರ್ ಎಸ್‌ಎಸ್‌ಪಿ ಶ್ಲೋಕ ಕುಮಾರ್ ಖಚಿತಪಡಿಸಿದ್ದಾರೆ. ಈ ಬಳಿಕ, ‘ಹಿಂದೂಗಳೇ ಮೂರ್ತಿಗಳನ್ನು ಧ್ವಂಸ ಮಾಡಿದ್ದಾರೆ’ ಎಂದು ಪತ್ರಕರ್ತ ಸುಧೀರ್ ಚೌಧರಿ ಅವರು ಟ್ವೀಟ್ ಮಾಡಿದ್ದಾರೆ. ವಿರೂಪಗೊಳಿಸಿದವರು ಮುಸ್ಲಿಮರು ಎಂಬುದು ಸುಳ್ಳು ಸುದ್ದಿ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.