ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ್ದವರು ಮುಸ್ಲಿಂ ಧ್ವಜಗಳನ್ನು ಹಿಡಿದಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಈ ಮೆರವಣಿಗೆಯು ಯಾವುದೇ ಇಸ್ಲಾಂ ದೇಶದ್ದಲ್ಲ. ಹರಿಯಾಣದ ಮೆವಾತ್‌ನಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ರ‍್ಯಾಲಿಯದ್ದು. ಇದರಲ್ಲಿ ಸೌದಿ ಅರೇಬಿಯಾ, ಪ್ಯಾಲೆಸ್ಟೀನ್ ಧ್ವಜಗಳನ್ನು ಕಾಣಬಹುದು. ಆದರೆ, ಕಾಂಗ್ರೆಸ್ ಪಕ್ಷದ ರ‍್ಯಾಲಿಯಲ್ಲಿ ಹಿಂದೂ, ಸಿಖ್ ಅಥವಾ ಜೈನ ಅಥವಾ ಪಾರ್ಸಿ ಧರ್ಮದ ಧ್ವಜಗಳನ್ನು ನೀವು ನೋಡಲಾರಿರಿ’ ಎಂದು ‘ಎಕ್ಸ್’ ಬಳಕೆದಾರ ಜಿತೇಂದ್ರ ಪ್ರತಾಪ್ ಸಿಂಗ್ ಪೋಸ್ಟ್ ಮಾಡಿದ್ದರು. ಆದರೆ, ಇದು ಕಾಂಗ್ರೆಸ್ ರ‍್ಯಾಲಿಯ ವಿಡಿಯೊ ಅಲ್ಲ.
ವಿಡಿಯೊವನ್ನು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಿದಾಗ, ಅದು ಮಹಾರಾಷ್ಟ್ರದಲ್ಲಿ ನಡೆದ ಮೆರವಣಿಗೆಯ ವಿಡಿಯೊ ಎಂಬುದಕ್ಕೆ ಹಲವು ಸುಳಿವುಗಳು ಸಿಕ್ಕಿದವು. ರ‍್ಯಾಲಿಯಲ್ಲಿ ಭಾಗವಹಿಸಿದ್ದ ಪೊಲೀಸ್ ವಾಹನದಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಲಾಂಛನ ಇತ್ತು. ಹತ್ತಿರದಲ್ಲೇ ಇದ್ದ ಅಂಗಡಿಗಳ ಫಲಕಗಳಲ್ಲಿ ಲಾತೂರ್ ಎಂದೂ ಬರೆಯಲಾಗಿತ್ತು. ವಿಡಿಯೊದಲ್ಲಿ ಕಾಣಿಸಿಕೊಳ್ಳುವ ಆಂಬುಲೆನ್ಸ್‌ನಲ್ಲಿ ಎಸ್.ಎಂ.ಸನಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಎಂದು ಬರೆಯಲಾಗಿತ್ತಲ್ಲದೆ, ಅದರಲ್ಲಿ ದೂರವಾಣಿ ಸಂಖ್ಯೆಯೂ ಇತ್ತು. ಅದು ಮಹಾರಾಷ್ಟ್ರದ ಲಾತೂರ್‌ನಲ್ಲಿರುವ ಆಸ್ಪತ್ರೆ ಎಂಬುದು ದೃಢಪಟ್ಟಿತು. ವಿಡಿಯೊದ ಕೀ ಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ಇದೇ ವಿಡಿಯೊವನ್ನು ಹಲವರು ಹಂಚಿಕೊಂಡಿದ್ದು ಕಂಡು ಬಂತು. ಈದ್ ಮಿಲಾದ್ ಹಬ್ಬದ ದಿನ ಲಾತೂರ್‌ನಲ್ಲಿ ನಡೆದ ಮೆರವಣಿಗೆಯ ವಿಡಿಯೊ ಎಂಬುದು ಖಚಿತವಾಯಿತು ಎಂದು ಬೂಮ್‌ಲೈವ್ ಫ್ಯಾಕ್ಟ್‌ಚೆಕ್ ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.