ADVERTISEMENT

ರಕ್ಕಸ ಮಗು ಜನಿಸಿದ್ದು ನಿಜವೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ನವೆಂಬರ್ 2019, 9:35 IST
Last Updated 29 ನವೆಂಬರ್ 2019, 9:35 IST
   

ಬೆಂಗಳೂರು: ‘ರಕ್ಕಸ ಮಾದರಿಯ ಮಗು ಜನನ! ಹುಟ್ಟುವಾಗಲೇ ಅಮ್ಮ, ನರ್ಸ್‌ ಮರಣ’ ಎಂಬ ಶೀರ್ಷಿಕೆಯೊಂದಿಗೆ... ‘ಅಸ್ಸಾಂನಲ್ಲಿ ವಿಜ್ಞಾನಿಗಳ ಊಹೆಗೂ ಮೀರಿದ ವಿಚಿತ್ರ ಆಕೃತಿಯುಳ್ಳ ಮಗುವಿನ ಜನನವಾಗಿದೆ. ಮಗು ಹುಟ್ಟುತ್ತಲೇ ಅಮ್ಮ ಮತ್ತು ದಾದಿಯನ್ನು ಕೊಂದಿದ್ದು, ಮಗುವಿಗೂ ಚುಚ್ಚು ಮದ್ದು ನೀಡಿ ಕೊಲ್ಲಲಾಗಿದೆ’ ಎಂಬ ಒಕ್ಕಣೆಯುಳ್ಳ ಪತ್ರಿಕೆಯೊಂದರ ತುಣುಕು ಮತ್ತು ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಈ ಚಿತ್ರ ಮತ್ತು ವಿಡಿಯೊಗಳನ್ನು ಹಲವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳ ಮೂಲಕಮತ್ತಷ್ಟು ಮಂದಿಗೆ ಹಂಚಿದ್ದಾರೆ.ಕೆಲವರು ಸತ್ಯಾಸತ್ಯತೆ ಬಗ್ಗೆ ಅನುಮಾನಗಳನ್ನೂ ವ್ಯಕ್ತಪಡಿಸಿದ್ದಾರೆ.

ಫ್ಯಾಕ್ಟ್‌ ಚೆಕ್‌

ADVERTISEMENT

‘ರಕ್ಕಸ ಮಾದರಿಯ ಮಗು ಜನನ! ಹಟ್ಟುವಾಗಲೇ ಅಮ್ಮ, ನರ್ಸ್‌ ಮರಣ,’ ಎಂಬ ಶೀರ್ಷಿಕೆಯ ಈ ಸುದ್ದಿಯ ನೈಜತೆಯನ್ನು ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ಚೆಕ್‌ ಮಾಡಿದೆ. ಇದು ರಕ್ಕಸ ಮಗು ಅಲ್ಲ, ಅತಿ ವಿರಳ ಕಾಯಿಲೆಯೊಂದಕ್ಕೆ ತುತ್ತಾಗಿರುವ ನತದೃಷ್ಟ ಮಗು ಎಂಬುದನ್ನು ಬಹಿರಂಗಪಡಿಸಿದೆ.

ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿನ ಮಗುವಿನ ಚಿತ್ರವನ್ನು ಸ್ಪಷ್ಟವಾಗಿ ಸ್ಕ್ರೀನ್‌ ಶಾಟ್‌ ಪಡೆದುಕೊಂಡು ಅದನ್ನು ಗೂಗಲ್‌ ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ ಇದು 2019ರ ಜುಲೈ 21ರಂದು ಯುಟೂಬ್‌ಗೆ ಅಪ್ಲೋಡ್‌ ಆದ ವಿಡಿಯೊ ಎಂಬುದು ಗೊತ್ತಾಗಿದೆ. ನಂತರದಲ್ಲಿ ಆ ವಿಡಿಯೊ ಕೂಡ ಡಿಲೀಟ್‌ ಆಗಿದೆ.

ವಿರಳ ಕಾಯಿಲೆಯ ಮಗು

ವಿಡಿಯೊದಲ್ಲಿದ್ದ ಮಗು ಜಗತ್ತಿನಲ್ಲೇ ಅತ್ಯಂತ ವಿರಳ ಎನಿಸುವ Harlequin Ichthyosis ಎಂಬ ಚರ್ಮದ ಸಮಸ್ಯೆಗೆ ತುತ್ತಾಗಿತ್ತು ಎಂಬುದು ಬಿಬಿಸಿ 2019ರಲ್ಲಿ ಪ್ರಕಟಿಸಿದ್ದ ವರದಿಯಿಂದ ಗೊತ್ತಾಗಿದೆ. ಈ ಸಮಸ್ಯೆ ಒಂದು ಕೋಟಿ ಮಕ್ಕಳಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ.

‘ಈ ಸಮಸ್ಯೆ ಇದ್ದವರಿಗೆ ಚರ್ಮದ ಮರುಸೃಷ್ಟಿಯಲ್ಲಿ ತೊಂದರೆ ಉಂಟಾಗಿ, ಹಳೇ ಚರ್ಮಕೋಶಗಳು ನಶಿಸಿ, ಹೊಸ ಚರ್ಮಕೋಶಗಳು ಬರಲು ಆಗದೆ ಚರ್ಮ ಬಿಗಿಯಾಗುತ್ತದೆ. ನಂತರ ದಪ್ಪನಾಗಿ ಬಿರುಕು ಬಿಡುತ್ತದೆ. ಮಕ್ಕಳಲ್ಲಿ ಈ ಸಮಸ್ಯೆ ಹುಟ್ಟುತ್ತಲೇ ಬಂದಿರಬಹುದು ಅಥವಾ ಹುಟ್ಟಿದ ಎರಡು ಮೂರು ವರ್ಷಗಳಲ್ಲಿ ಕಾಣಿಸಿಕೊಳ್ಳಬಹುದು’ ಎಂದು ಆ ವರದಿ ಹೇಳುತ್ತದೆ.

ಭಾರತದಲ್ಲಿ ವರದಿಯಾದ ಪ್ರಕರಣಗಳು

ಮಹಾರಾಷ್ಟ್ರದ ವಿದರ್ಭದಲ್ಲಿ 2016ರಲ್ಲಿ ಮೊತ್ತ ಮೊದಲ ಬಾರಿಗೆ ಈ ಸಮಸ್ಯೆಯ ಮಗು ಜನನವಾದ ಬಗ್ಗೆ ವರದಿಯಾಗಿತ್ತು. ಇದು ಭಾರತದಲ್ಲಿ ವರದಿಯಾದ ಮೊದಲ ಪ್ರಕರಣ. ಮಗು ಎರಡು ದಿನಗಳ ನಂತರ ಸಾವಿಗೀಡಾಗಿತ್ತು.

2017ರ ಜನವರಿಯಲ್ಲಿ ಬಿಹಾರದ ಪಾಟ್ನಾದಲ್ಲಿಯೂಇಂಥದ್ದೇ ಮಗು ಜನಿಸಿತ್ತು. ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ದೆಹಲಿಯ ಕಸ್ತೂರ್‌ಬಾ ಗಾಂಧಿ ಆಸ್ಪತ್ರೆಯಲ್ಲಿ ಇದೇ ಸಮಸ್ಯೆಯುಳ್ಳ ಮಗು ಹುಟ್ಟಿತ್ತು.

ಈ ಸಮಸ್ಯೆ ಇದ್ದ ಮಕ್ಕಳು ಉಳಿಯಲು ಸಾಧ್ಯವೇ?

ಹಿಂದುಸ್ಥಾನ್‌ ಟೈಮ್ಸ್‌ ಇತ್ತೀಚೆಗೆ ಮಾಡಿದ್ದ ವರಿದಿಯೊಂದರ ಪ್ರಕಾರ ಈ ಸಮಸ್ಯೆಗೆ ಔಷಧಿ ಇಲ್ಲ. ಆದರೆ, ಚಿಕಿತ್ಸೆಯ ಮೂಲಕ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇದು ಮಾರಕ ರೋಗವಾದರೂ, ನಿಯಮಿತ ಚಿಕತ್ಸೆಯಿಂದ ರೋಗಬಾಧೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು.

2015ರಲ್ಲಿ ಬ್ರಿಟಿಷ್‌ ಟ್ಯಾಬ್ಲಾಯ್ಡ್‌ ‘ಡೈಲಿ ಮೇಲ್‌’ ವರದಿಯೊಂದುಅಮೆರಿಕದ 23 ವರ್ಷದ ಮಹಿಳೆ ಸ್ಟೆಫಿನ್‌ ಟರ್ನರ್‌ ಅವರೇ Harlequin Ichthyosis ಸಮಸ್ಯೆಯೊಂದಿಗೆ ಜೀವಿಸುತ್ತಿರುವ ಜಗತ್ತಿನ ಅತ್ಯಂತ ಹಿರಿಯಾಕೆ ಎಂದು ಹೇಳಿತ್ತು.

ಆಕೆಯ ಚರ್ಮ ಸಾಮಾನ್ಯರಿಗಿಂತಲೂ 7 ಪಟ್ಟು ವೇಗದಲ್ಲಿ ಬೆಳೆಯುತ್ತಿದ್ದು, ಚರ್ಮ ಬಿಗಿಯಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅವರಿಗೆ ಇಬ್ಬರು ಆರೋಗ್ಯವಂತ ಮಕ್ಕಳೂ ಇದ್ದಾರೆ ಎಂಬುದು ಇಲ್ಲಿ ಗಮನಾರ್ಹ.

ರಕ್ಕಸ ಮಗುವಲ್ಲ

ಸದ್ಯ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಮಗು ರಕ್ಕಸ ಮಗುವಲ್ಲ. ವೈದ್ಯಕೀಯ ಲೋಕಕ್ಕೆ ಸವಾಲೆಸೆಯುವ ಆರೋಗ್ಯ ಸಮಸ್ಯೆಯೊಂದಿಗೆ ಜನಿಸಿದ್ದ ಮಗು. ಆದರೆ, ಆ ಮಗು ಜನಿಸಿದ್ದೆಲ್ಲಿ, ವಿಡಿಯೊವನ್ನು ಹರಿಬಿಟ್ಟಿದ್ದು ಯಾರು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.