‘ರತನ್ ಟಾಟಾ ಅವರು ತಮ್ಮ ಶ್ರೇಷ್ಠತೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಅಫ್ಗಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅವರು ಪಾಕಿಸ್ತಾನವನ್ನು ಸೋಲಿಸಿದ ಬಳಿಕ, ಇರ್ಫಾನ್ ಪಠಾಣ್ ಅವರೊಂದಿಗೆ ಭಾರತದ ಧ್ವಜ ಹಿಡಿದು ಸಂಭ್ರಮಿಸಿ, ಕುಣಿದು ಕುಪ್ಪಳಿಸಿದರು. ಭಾರತ್ ಮಾತಾ ಕಿ ಜೈ ಎಂದೂ ಘೋಷಣೆ ಕೂಗಿದರು. ಆದರೆ, ಈ ಬಗ್ಗೆ ಪಾಕಿಸ್ತಾನವು ಐಸಿಸಿಗೆ ದೂರು ನೀಡಿತು. ಐಸಿಸಿಯು ರಶೀದ್ ಖಾನ್ ಅವರಿಗೆ ₹55 ಲಕ್ಷ ದಂಡವನ್ನು ವಿಧಿಸಿತು. ಭಾರತದ ಧ್ವಜಕ್ಕೆ ಗೌರವ ತೋರಿದ ವ್ಯಕ್ತಿಯನ್ನು ಹೊಗಳಬೇಕು ಎಂದು ರತನ್ ಟಾಟಾ ಹೇಳಿದರು. ಐಸಿಸಿ ವಿಧಿಸಿದ ₹55 ಲಕ್ಷ ದಂಡವನ್ನು ತಾವೇ ನೀಡಿದ್ದು ಮಾತ್ರವಲ್ಲದೆ, ರಶೀದ್ ಖಾನ್ ಅವರಿಗೆ ₹10 ಕೋಟಿಯ ಭಾರಿ ಮೊತ್ತದ ಬಹುಮಾನವನ್ನು ಘೋಷಿಸಿದ್ದಾರೆ’ ಎಂಬಂತಹ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳನ್ನು ಭಾರಿ ಸಂಖ್ಯೆಯಲ್ಲಿ ಹರಿದಾಡುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಪೋಸ್ಟ್‌ಗಳ ಬಗ್ಗೆ ಸ್ವತಃ ರತನ್ ಟಾಟಾ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ‘ನಾನು ಐಸಿಸಿಗೆ ಅಥವಾ ಕ್ರಿಕೆಟ್‌ನ ಯಾವುದೇ ಸಂಸ್ಥೆಗೆ ಯಾವ ಸಲಹೆಯನ್ನೂ ನೀಡಿಲ್ಲ. ಯಾವುದೇ ಕ್ರಿಕೆಟ್ ಆಟಗಾರನಿಗೆ ಬಹುಮಾನವನ್ನು ಘೋಷಿಸಿಲ್ಲ, ದಂಡ ಭರಿಸುವುದಾಗಿಯೂ ಹೇಳಿಲ್ಲ. ಕ್ರಿಕೆಟ್‌ಗೂ ನನಗೂ ಇಲ್ಲಿಯವರೆಗೂ ಯಾವುದೇ ಸಂಬಂಧ ಏರ್ಪಟ್ಟಿಲ್ಲ. ವಾಟ್ಸ್‌ಆ್ಯಪ್ ಫಾರ್ವಾರ್ಡ್‌ಗಳನ್ನು ನಂಬಬೇಡಿ’ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.