‘ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡುತ್ತಿದೆ ಎಂದು ಆರೋಪಿಸುತ್ತಿರುವವರು ಈ ಸಂಗತಿಯನ್ನು ಮರೆತಿದ್ದಾರೆ. ಎಲ್‌ಪಿಜಿ ಸಿಲಿಂಡರ್ ಮೇಲೆ ಕೇಂದ್ರ ಸರ್ಕಾರವು ಶೇ 5ರಷ್ಟು ತೆರಿಗೆಯನ್ನಷ್ಟೇ ವಿಧಿಸುತ್ತದೆ. ಆದರೆ, ರಾಜ್ಯ ಸರ್ಕಾರಗಳು ಶೇ 55ರಷ್ಟು ತೆರಿಗೆ ವಿಧಿಸುತ್ತಿದೆ. ಇದರಿಂದಲೇ ಎಲ್‌ಪಿಜಿ ಬೆಲೆ ವಿಪರೀತ ಏರಿಕೆಯಾಗಿದೆ. ಎಲ್‌ಪಿಜಿ ಸಿಲಿಂಡರ್‌ಗಾಗಿ ನಾವು ಪಾವತಿಸುವ ಹಣದಲ್ಲಿ ಬಹುಪಾಲ ತೆರಿಗೆರೂಪದಲ್ಲಿ ರಾಜ್ಯ ಸರ್ಕಾರಕ್ಕೇ ಹೋಗುತ್ತದೆ’ ಎಂಬ ವಿವರ ಇರುವ ಪೋಸ್ಟರ್ ಮತ್ತು ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದು ತಪ್ಪು ಮಾಹಿತಿ.
ಎಲ್‌ಪಿಜಿ ಸಿಲಿಂಡರ್ ಮೇಲೆ ಕೇಂದ್ರ ಸರ್ಕಾರವು ಶೇ 5ರಷ್ಟು ಜಿಎಸ್‌ಟಿ ವಿಧಿಸುತ್ತದೆ. ಇದರಲ್ಲಿ ಕೇಂದ್ರ ಸರ್ಕಾರಕ್ಕೆ ಶೇ 2.50ರಷ್ಟು ಮತ್ತು ರಾಜ್ಯ ಸರ್ಕಾರಕ್ಕೆ ಶೇ 2.50ರಷ್ಟು ಹಂಚಿಕೆಯಾಗುತ್ತದೆ. ರಾಜ್ಯ ಸರ್ಕಾರವು ಯಾವದೇ ಹೆಚ್ಚಿನ ತೆರಿಗೆ ವಿಧಿಸುವುದಿಲ್ಲ. ಬದಲಿಗೆ ಕೇಂದ್ರ ಸರ್ಕಾರವೇ ಎಲ್‌ಪಿಜಿ ತಯಾರಿಕೆಯ ಕಚ್ಚಾವಸ್ತುವಾದ ನೈಸರ್ಗಿಕ ಅನಿಲದ (ಸಾಂದ್ರೀಕೃತ) ಮೇಲೆ ಶೇ 5ರಷ್ಟು ಆಮದು ಸುಂಕ, ಶೇ 14ರಷ್ಟು ಹೆಚ್ಚುವರಿ ಆಮದು ಸುಂಕ ಮತ್ತು ಶೇ 14ರಷ್ಟು ಎಕ್ಸೈಸ್ ಸುಂಕ ವಿಧಿಸುತ್ತದೆ. ನೈಸರ್ಗಿಕ ಅನಿಲದ ಮೇಲೆ ಶೇ 5ರಷ್ಟು ಆಮದು ಸುಂಕ ವಿಧಿಸುತ್ತದೆ. ಕಚ್ಚಾತೈಲ ಸಂಸ್ಕರಣೆ ಮೂಲಕವೂ ಎಲ್‌ಪಿಜಿ ತಯಾರಿಸಲಾಗುತ್ತದೆ. ಕಚ್ಚಾತೈಲದ ಮೇಲೆ ಕೇಂದ್ರ ಸರ್ಕಾರವು ₹51ರಷ್ಟು ಆಮದು ಸುಂಕ, ₹51ರಷ್ಟು ಎಕ್ಸೈಸ್ ಸುಂಕ ಮತ್ತು ಪ್ರತಿ ಟನ್‌ಗೆ ₹6,700ರಷ್ಟು ಹೆಚ್ಚುವರಿ ಎಕ್ಸೈಸ್ ಸುಂಕ ವಿಧಿಸುತ್ತದೆ. ಈ ಪ್ರಕಾರ ಎಲ್‌ಪಿಜಿ ಸಿಲಿಂಡರ್ ಮೇಲೆ ಕೇಂದ್ರ ಸರ್ಕಾರವು ಹೆಚ್ಚಿನ ತೆರಿಗೆ ವಿಧಿಸದೇ ಇದ್ದರೂ, ಎಲ್‌ಪಿಜಿ ತಯಾರಿಕೆಯಲ್ಲಿ ಬಳಸುವ ಕಚ್ಚಾತೈಲದ ಮೇಲೆ ಭಾರಿ ಪ್ರಮಾಣದ ತೆರಿಗೆ ವಿಧಿಸುತ್ತದೆ. ಆದರೆ ಈ ಸಂದೇಶಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ರಾಜ್ಯ ಸರ್ಕಾರಗಳು ಶೇ 55ರಷ್ಟು ತೆರಿಗೆ ವಿಧಿಸುತ್ತವೆ ಎಂಬುದು ಸುಳ್ಳು ಸುದ್ದಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.