ADVERTISEMENT

‘ಪಾಕಿಸ್ತಾನದ ಪರವಾಗಿ ಯುದ್ಧ ಮಾಡುವೆ’–ಇದು ಪೈಲಟ್‌ ಅಭಿನಂದನ್‌ ಹೆಸರಿನ ನಕಲಿ ಖಾತೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 14:18 IST
Last Updated 2 ಮಾರ್ಚ್ 2019, 14:18 IST
   

ವೈಮಾನಿಕ ಕದನದ ಬಳಿಕ ಭಾರತೀಯರು ಹೀರೊ ಆಗಿ ಆರಾಧಿಸುತ್ತಿರುವ ವಿಂಗ್ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌, ಹಲವು ಯುವಕರಲ್ಲಿ ವಾಯುಪಡೆ ಸೇರುವ ಸ್ಫೂರ್ತಿ ತುಂಬಿದ ಐಕಾನ್‌ ಆಗಿಯೂ ಸ್ವೀಕೃತರಾಗಿದ್ದಾರೆ. ಈ ಕಾರಣಗಳಿಂದಲೂ ಅಭಿನಂದನ್‌ ಹೆಸರಿನಲ್ಲಿ ಹಲವು ಫೇಕ್‌ ಖಾತೆ ಹಾಗೂ ಪೇಜ್‌ಗಳು ಸೃಷ್ಟಿಯಾಗಿವೆ. ಕೆಲವು ಖಾತೆಗಳು ಅಭಿನಂದನ್‌ ಚಿತ್ರಗಳು, ದೇಶಭಕ್ತಿಯ ಸಂದೇಶಗಳನ್ನು ಒಳಗೊಂಡಿದ್ದರೆ, ದೇಶದ ಜನರಿಗೆ ಧನ್ಯವಾದಗಳನ್ನು ಹೇಳಿರುವ ಖಾತೆಗಳೂ ಇವೆ. ಇನ್ನೂ ಕೆಲವು ಪಾಕಿಸ್ತಾನದ ಪರವಾಗಿ, ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸಲು ಬಳಸಿಕೊಳ್ಳಲಾಗಿದೆ.

ಪಾಕಿಸ್ತಾನ ಸೇನೆಯ ವಶದಲ್ಲಿದ್ದ ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್ ಶುಕ್ರವಾರ ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿದ್ದಾರೆ. ಪಾಕಿಸ್ತಾನ ಸೇನೆ ನಡೆಸಿರುವ ವಿಚಾರಣೆ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಅಭಿನಂದನ್‌ ಅವರ ದಿಟ್ಟತನವನ್ನು ಪ್ರಶಂಸಿಸಿ ಹಲವು ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು. ಅವರು ಭಾರತಕ್ಕೆ ಮರಳುವ ಸುದ್ದಿ ಹೊರಬರುತ್ತಿದ್ದಂತೆ ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಅವರದೇ ಹೆಸರಿನಲ್ಲಿ ಹತ್ತಾರು ಖಾತೆಗಳು ಸೃಷ್ಟಿಯಾದವು. ಆ ಪೈಕಿ ಕೆಲಖಾತೆಗಳು ಪಾಕಿಸ್ತಾನದ ಪರವಾಗಿ ಸಂದೇಶಗಳನ್ನು ಪ್ರಕಟಿಸುತ್ತಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

ಅಭಿನಂದನ್‌ ವರ್ಧಮಾನ್ ಅವರದೇ ಚಿತ್ರ ಹಾಗೂ ಹೆಸರಿರುವ ಟ್ವಿಟರ್‌ ಖಾತೆ, ‘ಭಾರತದ ವಾಯುಪಡೆಯ ಪೈಲಟ್‌–ಹೃದಯ ಈಗಪಾಕಿಸ್ತಾನಕ್ಕಾಗಿ ಮಿಡಿಯುತ್ತಿದೆ’ ಎಂದುವಿವರಣೆ ಹೊಂದಿದೆ. ಇದರಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಧನ್ಯವಾದ ಅರ್ಪಿಸುವುದರೊಂದಿಗೆ ‘ನಾನು ಭಾರತೀಯ ವಾಯುಪಡೆ ಪೈಲಟ್‌ ಆಗಿದ್ದರೂ ಪಾಕಿಸ್ತಾನಕ್ಕೆ ಎಲ್ಲ ಯುದ್ಧಗಳಲ್ಲಿಯೂ ಹೋರಾಡುತ್ತೇನೆ...’ ಹೀಗೆ ಪಾಕಿಸ್ತಾನದ ಪರವಾಗಿ ಬರೆದುಕೊಂಡಿರುವ ಸಂದೇಶಗಳನ್ನು ಖಾತೆ ಒಳಗೊಂಡಿದೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ, ತಾಯ್ನಾಡಿಗೆ ಮರಳಿರುವುದಕ್ಕೆ ಸ್ವಾಗತ ಕೋರಿ ಟ್ವೀಟ್‌ ಮಾಡಿದ್ದರು. ಈ ಸಂದೇಶಕ್ಕೆ ಅಭಿನಂದನ್‌ ಹೆಸರಿನ ಹಲವು ಖಾತೆಗಳಿಂದ ಧನ್ಯವಾದದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಈ ಯಾವ ಖಾತೆಗಳೂ ಸಹ ಅಭಿನಂದನ್‌ ಬಳಸುತ್ತಿರುವ ಅಧಿಕೃತ ಖಾತೆಗಳಲ್ಲ. ಟ್ವಿಟರ್‌, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ’ಅಭಿನಂದನ್‌’ ಅಥವಾ ’ಅಭಿನಂದನ್‌ ವರ್ಧಮಾನ್‌’ ಎಂದು ಹುಡುಕಿದರೆ, ಹತ್ತಾರು ಖಾತೆಗಳ ಪಟ್ಟಿ ಎದುರಾಗುತ್ತವೆ. ಇವುಗಳಲ್ಲಿ ಯಾವುದು ಸತ್ಯ, ಯಾವುದು ಮಿಥ್ಯ?

ಬಹುತೇಕ ಖಾತೆಗಳು 2019ರ ಫೆಬ್ರುವರಿ 27 ಹಾಗೂ 28ರಂದು ಆರಂಭಗೊಂಡಿವೆ. ಪಾಕಿಸ್ತಾನ ಸೇನೆಯ ವಶಕ್ಕೆ ಸಿಲುಕಿದ ದಿನವೇ(ಫೆ.27, ಬುಧವಾರ) ಹಲವು ಖಾತೆಗಳು ತೆರೆದುಕೊಂಡಿರುವುದು ನಕಲಿ ಖಾತೆ ಎಂಬುದಕ್ಕೆ ಬಲವಾದ ಸಾಕ್ಷ್ಯವಾಗಿದೆ.

ಅಭಿನಂದನ್‌ ಬದಲು ಅಭಿನಂದ, ವರ್ಧಮಾನ್‌ಗೆ ವರ್ಧಮಾನ್ನ,...ಹೀಗೆ. ಹಲವು ಖಾತೆಗಳ ಹೆಸರಿನ ಅಕ್ಷರಗಳಲ್ಲಿಯೂ ವ್ಯತ್ಯಾಸವಿರುವುದನ್ನೂ ಗಮನಿಸಬಹುದು. ಇನ್‌ಸ್ಟಾಗ್ರಾಮ್‌ನಲ್ಲಿ ಅಧಿಕೃತ ಎಂದು ಹೆಸರಿನೊಂದಿಗೆ ಬರೆದುಕೊಂಡಿರುವ ಖಾತೆಯನ್ನು ಈಗಾಗಲೇ 2.4 ಲಕ್ಷಕ್ಕೂ ಹೆಚ್ಚು ಜನರು ಹಿಂಬಾಲಿಸುತ್ತಿದ್ದಾರೆ. ಅಲ್ಲಿನ ಕೆಲವೇ ಕೆಲವು ಪೋಸ್ಟ್‌ಗಳಿಗೆ ಸಾವಿರಾರು ಜನರು ಪ್ರತಿಕ್ರಿಯೆ ನೀಡಿದ್ದು, ಇದೊಂದು ಫೇಕ್‌ ಖಾತೆ ಎಂದೂ ಕೆಲವರು ಗುರುತಿಸಿದ್ದಾರೆ.

ಫೇಸ್‌ಬುಕ್‌ನಲ್ಲಿಯೂ ಇಂಥದ್ದೇ ಹಲವು ಖಾತೆಗಳು ಹಾಗೂ ಪೇಜ್‌ಗಳನ್ನು ಜನರು ಹಿಂಬಾಲಿಸಿದ್ದಾರೆ. ಕೆಲವು ಪೋಸ್ಟ್‌ಗಳಿಗೆ ದೇಶಾಭಿಮಾನದೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಟ್ವಿಟರ್‌ನ ಫೇಕ್‌ ಖಾತೆಗಳಲ್ಲಿ ಅಭಿನಂದನ್‌ ಅವರಿಗೆ ಸಂಬಂಧಿಸಿದ ಬೆಳವಣಿಗೆಗಳನ್ನು ಅವರೇ ಬರೆದುಕೊಂಡಿರುವಂತೆ ಪ್ರಕಟಿಸಿಕೊಳ್ಳಲಾಗುತ್ತಿದೆ. ರಕ್ಷಣಾ ಸಚಿವೆನಿರ್ಮಲಾ ಸೀತಾರಾಮನ್‌, ಅಭಿನಂದನ್‌ ಅವರನ್ನು ಶನಿವಾರ ಭೇಟಿ ಮಾಡಿರುವ ಚಿತ್ರವನ್ನೂ ಸಹ ಪ್ರಕಟಿಸಿಕೊಂಡು; ‘ರಕ್ಷಣಾ ಸಚಿವರನ್ನು ಭೇಟಿಯಾದೆ, ಪಾಕಿಸ್ತಾನ ನೀಡಿದ ಆತಿಥ್ಯದ ಬಗ್ಗೆ ತಿಳಿಸಿದೆ ಹಾಗೂ ಈಗಿನಿಂದ ಎಲ್ಲ ಯುದ್ಧಗಳಲ್ಲಿ ಪಾಕಿಸ್ತಾನದ ಪರವಾಗಿ ಹೋರಾಟ ನಡೆಸುವುದಾಗಿಯೂ ಹೇಳಿದ್ದೇನೆ. ಇಮ್ರಾನ್‌ ಖಾನ್‌ ಜಿಂದಾಬಾದ್‌....’ ಎಂದೆಲ್ಲ ಬರೆಯಲಾಗಿದೆ. ಈ ಖಾತೆಯನ್ನು 1,706 ಮಂದಿ ಹಿಂಬಾಲಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.