ಶಿರಡಿ, ಮಹಾರಾಷ್ಟ್ರ (ಪಿಟಿಐ): ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತಾದ ಗೀತೆಯನ್ನು ಮೊಬೈಲ್ ರಿಂಗ್‌ಟೋನ್ ಆಗಿಟ್ಟುಕೊಂಡಿದ್ದ ಕಾರಣಕ್ಕಾಗಿಯೇ ಶಿರಡಿಯಲ್ಲಿ ದಲಿತ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ವಾರದ ಹಿಂದೆ 21 ವರ್ಷದ ಯುವಕನನ್ನು ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ನಾಲ್ವರು ಹಂತಕರನ್ನು ಪೊಲೀಸರು ಗೋವಾ, ಪುಣೆ ಹಾಗೂ ಶಿರಡಿಯಲ್ಲಿ ಬಂಧಿಸಿದ್ದಾರೆ. ತಲೆ ಮರೆಸಿಕೊಂಡ ಇನ್ನೂ ಕೆಲವರಿಗಾಗಿ ಪೊಲೀಸರು ಶೋಧಿಸುತ್ತಿದ್ದಾರೆ.
ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೇ 16ರಂದು ಶಿರಡಿಗೆ ಬಂದಿದ್ದ ಸಾಗರ್ ಶೇಜ್‌ವಾಲ್ ಎಂಬ 21 ವರ್ಷದ ನರ್ಸಿಂಗ್ ವಿದ್ಯಾರ್ಥಿ ತನ್ನ ಸಂಬಂಧಿಗಳ ಜತೆ ಸ್ಥಳೀಯ ಬಾರ್‌ವೊಂದರಲ್ಲಿ ಕುಳಿತಿದ್ದ. ಆಗ ಆತನ ಮೊಬೈಲ್‌ಗೆ ಕರೆಯೊಂದು ಬಂತು.
‘ಕರಾ ಕಿತಿಹಿ ಹಲ್ಲಾ, ಮಜಬೂತ್ ಭೀಮ್ಚಾ ಕಿಲ್ಲಾ’ (ನಿಮ್ಮ ಮನಬಂದಂತೆ ಕೂಗಿ, ಭೀಮನ ಕೋಟೆ ಭದ್ರವಾಗಿದೆ ಎಂದು) ಎಂಬ ಅಂಬೇಡ್ಕರ್ ಅವರನ್ನು ಹೊಗಳುವ ರಿಂಗ್‌ಟೋನ್ ಮೊಳಗಿತು.
ಇದರಿಂದ ಸಿಟ್ಟಿಗೆದ್ದ ಪಕ್ಕದಲ್ಲಿ ಕುಳಿತಿದ್ದ ಎಂಟು ಜನರ ಗುಂಪು ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಆದೇಶಿಸಿತು. ಇದು ಪರಸ್ಪರ ವಾಗ್ವಾದ, ಮಾತಿಕ ಚಕಮಕಿಗೆ ಕಾರಣವಾಯಿತು. ಆಗ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಸಿಟ್ಟಿನಿಂದ ಸಾಗರ್ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದ. ನಂತರ ಗುಂಪಿನಲ್ಲಿದ್ದ ಇತರರು ಮನಬಂದಂತೆ ಯುವಕನನ್ನು ಥಳಿಸಿದರು.
ನಂತರ ತಮ್ಮ ಬೈಕ್‌ನಲ್ಲಿ ಸಾಗರ್‌ನನ್ನು ಸಮೀಪದ ಕಾಡೊಂದಕ್ಕೆ ಎಳೆದೊಯ್ದರು. ಯುವಕನ ಶವ ಶಿರಡಿ ಸಮೀಪದ ಶಿಂಗ್ವೆ ಗ್ರಾಮದಲ್ಲಿ ಪತ್ತೆಯಾಗಿತ್ತು. ಯುವಕನ ಮೇಲೆ ಹಲವಾರು ಬಾರಿ ಬೈಕ್ ಹತ್ತಿಸಲಾಗಿದ್ದು, ಕಲ್ಲಿನಿಂದ ಜಜ್ಜಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ಮೊಬೈಲ್ ನಾಪತ್ತೆಯಾಗಿದ್ದು, ಬಾರ್ ಸಿಸಿಟಿವಿ ದೃಶ್ಯಾವಳಿ ನೆರವಿನಿಂದ ಹಂತಕರನ್ನು ಪತ್ತೆ ಹಚ್ಚಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.