ನವದೆಹಲಿ: ಸಂಸತ್ ಭವನದ ಮೇಲೆ 12 ವರ್ಷಗಳ ಹಿಂದೆ ನಡೆದ ದಾಳಿಯಲ್ಲಿ ಉಗ್ರರಿಗೆ ಸಹಾಯ, ಸಹಕಾರ ನೀಡಿದ್ದ `ಜೈಶ್-ಇ- ಮೊಹಮ್ಮದ್' ಭಯೋತ್ಪಾದನಾ ಸಂಘಟನೆ ಸದಸ್ಯ ಮೊಹಮ್ಮದ್ ಅಫ್ಜಲ್ ಗುರುವನ್ನು ಕೊನೆಗೂ ಶನಿವಾರ ಬೆಳಿಗ್ಗೆ ಎಂಟು ಗಂಟೆಗೆ ಗಲ್ಲಿಗೇರಿಸಲಾಯಿತು. ರಾಜಧಾನಿಯ ತಿಹಾರ್ ಜೈಲಿನಲ್ಲಿ ನಡೆದ `ಅತ್ಯಂತ ರಹಸ್ಯ ಕಾರ್ಯಾಚರಣೆ'ಯಲ್ಲಿ ಈತನ ಕೊರಳಿಗೆ ಉರುಳು ಬಿತ್ತು.
43 ವರ್ಷದ ಅಫ್ಜಲ್ ಗುರುವನ್ನು ಬೆಳಿಗ್ಗೆ 7.30ಕ್ಕೆ ನೇಣುಗಂಬದ ಬಳಿಗೆ ಕರೆತರಲಾಯಿತು. `ಆ ಸಮಯದಲ್ಲಿ ಆತ ಶಾಂತ ಮತ್ತು ಸಮಾಧಾನಚಿತ್ತನಾಗಿದ್ದ. ಮುಖದ ಮೇಲೆ ಪಶ್ಚಾತ್ತಾಪದ ಭಾವವಿರಲಿಲ್ಲ' ಎಂದು ನೇಣಿನ ಸಿದ್ಧತೆ ನಡೆಸಿದ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ನೇಣು ಹಾಕುವ ವಿಷಯವನ್ನು ತಿಹಾರ್‌ನ ಮೂರನೇ ನಂಬರ್ ಜೈಲಿನಲ್ಲಿದ್ದ ಆತನಿಗೆ ಶುಕ್ರವಾರ ಸಂಜೆ ತಿಳಿಸಲಾಗಿತ್ತು. ಇದರಿಂದ ಆತ ಸ್ವಲ್ಪ ಆತಂಕಕ್ಕೊಳಗಾದಂತೆ ಕಂಡುಬಂದ. ಶನಿವಾರ ಬೆಳಿಗ್ಗೆ 5 ಗಂಟೆಗೆ ಆತನನ್ನು ಎಬ್ಬಿಸಿ ಚಹಾ ನೀಡಲಾಯಿತು. ಎದ್ದ ತಕ್ಷಣ ಆತ `ನಮಾಜ್' ಮಾಡಿದ. ನಂತರ ನೇಣುಗಂಬದ ಬಳಿ ಕರೆತಂದಾಗ ವೈದ್ಯರು ಆತನ ಆರೋಗ್ಯ ತಪಾಸಣೆ ನಡೆಸಿದರು. ಅನಂತರ ಗಲ್ಲಿಗೇರಿಸಲಾಯಿತು. 8 ನಿಮಿಷದಲ್ಲಿ ಈ ಕಾರ್ಯ ಮುಗಿಯಿತು. ಜೈಲಿನ ನಿಯಮಗಳ ಪ್ರಕಾರ ಈ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್, ವೈದ್ಯರು ಹಾಗೂ ಜೈಲಿನ ಹಿರಿಯ ಅಧಿಕಾರಿಗಳು ಹಾಜರಿದ್ದರು.
ನೇಣುಗಂಬಕ್ಕೆ ಏರಿಸಿದ ಮೂರನೇ ನಂಬರ್ ಜೈಲಿನ ಬಳಿಯೇ ಮುಸ್ಲಿಂ ಸಂಪ್ರದಾಯದಂತೆ ಆತನ ಶವದ ಅಂತ್ಯಸಂಸ್ಕಾರ ನಡೆಯಿತು. ಮೌಲ್ವಿಯೊಬ್ಬರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು ಎಂದು ಜೈಲು ಅಧಿಕಾರಿಗಳು ತಿಳಿಸಿದರು.
ಶಿಂಧೆ ಹೇಳಿಕೆ: ಕೆಲ ಹೊತ್ತಿನ ಬಳಿಕ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ ಸುದ್ದಿ ಪ್ರಕಟಿಸಿದರು. ಮಾನವ ಹಕ್ಕು ಸಂಘಟನೆಗಳು ಗಲ್ಲು ಶಿಕ್ಷೆಗೆ ಆಕ್ಷೇಪಿಸಿವೆ. ಆದರೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಬಹುತೇಕ ಪಕ್ಷಗಳು ಸ್ವಾಗತಿಸಿವೆ. ಆತನಿಗೆ ಗಲ್ಲು ಶಿಕ್ಷೆ ಜಾರಿಗೊಳಿಸುವ ವಿಷಯವನ್ನು ಕೇಂದ್ರ ಸರ್ಕಾರ ಶುಕ್ರವಾರ ರಾತ್ರಿಯೇ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರಿಗೆ ತಿಳಿಸಿತ್ತು. ಹಣ್ಣಿನ ವ್ಯಾಪಾರದ ದಲ್ಲಾಳಿಯಾಗಿದ್ದ ಅಫ್ಜಲ್ ಮೂಲತಃ ಉತ್ತರ ಕಾಶ್ಮೀರದ ಸೊಪೋರ್‌ನವನು. ಆತನ ಪತ್ನಿ ಮತ್ತು ಮತ್ತು ಮಗ ಈಗಲೂ ಅಲ್ಲಿಯೇ ವಾಸವಾಗಿದ್ದಾರೆ.
ನಡೆದದ್ದೇನು: ಭಾರಿ ಶಸ್ತ್ರಗಳನ್ನು ಹೊಂದಿದ್ದ ಐವರು ಉಗ್ರರು 2001ರ ಡಿಸೆಂಬರ್ 13ರಂದು ಸಂಸತ್ ಭವನದ ಆವರಣದೊಳಕ್ಕೆ ನುಗ್ಗಿ ಯದ್ವಾತದ್ವಾ ಗುಂಡು ಹಾರಿಸಿ ಒಂಬತ್ತು ಮಂದಿಯನ್ನು ಹತ್ಯೆ ಮಾಡಿದ್ದರು. ಮೃತರಲ್ಲಿ ಐವರು ದೆಹಲಿ ಪೊಲೀಸರು, ಕೇಂದ್ರ ಮೀಸಲು ಪಡೆಯ ಮಹಿಳಾ ಕಾನ್‌ಸ್ಟೇಬಲ್, ಇಬ್ಬರು ಕಾವಲು ಸಿಬ್ಬಂದಿ ಮತ್ತು ತೋಟದ ಮಾಲಿಯೊಬ್ಬರು ಸೇರ್ದ್ದಿದರು. ದಾಳಿಯಲ್ಲಿ ಗಾಯಗೊಂಡಿದ್ದ ಪತ್ರಕರ್ತರೊಬ್ಬರು ಅನಂತರ ಕೊನೆಯುಸಿರೆಳೆದಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಈ ಐವರು ಉಗ್ರರನ್ನು ಸ್ಥಳದಲ್ಲೇ ಗುಂಡಿಕ್ಕಿ ಕೊಂದಿದ್ದರು. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಅಫ್ಜಲ್ ಗುರುವನ್ನು ರಾಜಧಾನಿಯ ಬಸ್ಸೊಂದರಲ್ಲಿ ಬಂಧಿಸಲಾಗಿತ್ತು.
ಸಂಚಿನಲ್ಲಿ ಭಾಗಿಯಾದ ಆರೋಪಕ್ಕಾಗಿ ಈತ ನೀಡಿದ ಸುಳಿವು ಆಧರಿಸಿ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಸ್.ಎ.ಆರ್ ಗಿಲಾನಿ, ಶೌಕತ್ ಹುಸೇನ್‌ರನ್ನೂ ಬಂಧಿಸಲಾಯಿತು. ವಿಶೇಷ ಕೋರ್ಟ್ ಈ ಮೂವರಿಗೂ ಗಲ್ಲು ಶಿಕ್ಷೆ ವಿಧಿಸಿತು. 2003ರಲ್ಲಿ ಹೈಕೋರ್ಟ್ ಗಿಲಾನಿಯನ್ನು ಬಿಡುಗಡೆ ಮಾಡಿತು. ಗುರು ಹಾಗೂ ಶೌಕತ್ ಶಿಕ್ಷೆಯನ್ನು ಎತ್ತಿಹಿಡಿಯಿತು. ಸುಪ್ರೀಂಕೋರ್ಟ್ 2005ರಲ್ಲಿ ಗುರುವಿಗೆ ನೇಣು ಕಾಯಂಗೊಳಿಸಿತು. ಶೌಕತ್ ಶಿಕ್ಷೆಯನ್ನು ಹತ್ತು ವರ್ಷ ಜೈಲು ಶಿಕ್ಷೆಯಾಗಿ ಪರಿವರ್ತಿಸಲಾಯಿತು.
ಗೃಹ ಸಚಿವಾಲಯ 2011ರಲ್ಲಿ ಅಫ್ಜಲ್ ಗುರು ಪ್ರಕರಣವನ್ನು ರಾಷ್ಟ್ರಪತಿಗಳಿಗೆ ಕಳುಹಿಸಿತ್ತು. ಹೋದ ವರ್ಷ ಹೊಸ ರಾಷ್ಟ್ರಪತಿ ಹಾಗೂ ಹೊಸ ಗೃಹ ಸಚಿವರು ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನ ಅಫ್ಜಲ್ ಗುರು ಪ್ರಕರಣದ ಕಡತವನ್ನು ಗೃಹ ಸಚಿವಾಲಯಕ್ಕೆ ಹಿಂತಿರುಗಿಸಿತ್ತು. ಈ ವರ್ಷ ಜನವರಿ 21ರಂದು ಗೃಹ ಸಚಿವಾಲಯ ಗುರು ಕಡತವನ್ನು ರಾಷ್ಟ್ರಪತಿಗಳಿಗೆ ಮತ್ತೆ ಕಳುಹಿಸಿತ್ತು. ಫೆ.3ರಂದು ಗುರುವಿನ ಕ್ಷಮಾದಾನದ ಅರ್ಜಿಯನ್ನು ಪ್ರಣವ್ ಮುಖರ್ಜಿ ತಿರಸ್ಕರಿಸಿ ಗೃಹ ಸಚಿವಾಲಯಕ್ಕೆ ರವಾನಿಸಿದರು. ನಂತರ ಗೃಹ ಸಚಿವರು ಅಫ್ಜಲ್ ಗುರುವನ್ನು ನೇಣಿಗೆ ಹಾಕಲು ಅನುಮತಿಸಿದರು.
ಜೈಲಲ್ಲೇ ಮಣ್ಣಾದವರು
ಮುಂಬೈ ಮೇಲೆ ದಾಳಿ ಮಾಡಿದ ಉಗ್ರ ಕಸಾಬ್‌ನನ್ನು ಕಳೆದ ನ. 21ರಂದು ಬೆಳಿಗ್ಗೆ ಅತ್ಯಂತ ರಹಸ್ಯವಾಗಿ ನೇಣಿಗೇರಿಸಿದ ರೀತಿಯಲ್ಲೇ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲಾಯಿತು. ಪುಣೆಯ ಯೆರವಡಾ ಜೈಲಿನ ಆವರಣದಲ್ಲಿ ಕಸಾಬ್ ದೇಹವನ್ನು ಮಣ್ಣು ಮಾಡಿದಂತೆ ಗುರು ದೇಹವನ್ನು ತಿಹಾರ್ ಜೈಲಿನ ಆವರಣದಲ್ಲೇ ಹೂಳಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.