ADVERTISEMENT

ಅಭಿವೃದ್ಧಿಯೇ ಮುಖ್ಯ ರಾಮಮಂದಿರ ಅಲ್ಲ

ಬಾಬರಿ ಮಸೀದಿಯ ವಿವಾದ ಮಾತುಕತೆ ಮೂಲಕ ಬಗೆಹರಿಯಲಿ: ರಾಜನಾಥ್

​ಪ್ರಜಾವಾಣಿ ವಾರ್ತೆ
Published 29 ಮೇ 2015, 19:30 IST
Last Updated 29 ಮೇ 2015, 19:30 IST

ನವದೆಹಲಿ (ಪಿಟಿಐ): ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದು ಪ್ರಮುಖ ವಿಷಯ ಎನ್ನುವುದರಲ್ಲಿ ಎರಡು ಮಾತಿಲ್ಲ.  ನ್ಯಾಯಾಲಯದ ಹೊರಗೆ ರಾಜಿಪಂಚಾಯ್ತಿ ಮೂಲಕ ಈ ವಿವಾದ ಬಗೆಹರಿಸಿಕೊಳ್ಳುವುದಕ್ಕೆ ಸರ್ಕಾರ ಇಷ್ಟ ಪಡುತ್ತದೆ. ಆದರೆ, ಇದಕ್ಕಿಂತ ಅಭಿವೃದ್ಧಿ ನಮಗೆ ಮುಖ್ಯ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಸ್ಪಷ್ಟಪಡಿಸಿದರು.

ಎನ್‌ಡಿಎ ಸರ್ಕಾರದ ಸಾಧನೆಗಳನ್ನು ಅನಾವರಣಗೊಳಿಸಲು ಶುಕ್ರವಾರ  ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾ
ಡಿದ ಅವರು, ‘ಎಲ್ಲವೂ ಪ್ರಮುಖ ವಿಷಯಗಳೇ ಆಗಿವೆ. ಆದರೆ ಆದ್ಯತೆಗಳನ್ನು ಗುರುತಿಸಿಕೊಳ್ಳಬೇಕು. ಈಗ ನಾವು ಅಭಿವೃದ್ಧಿ ಕಾರ್ಯಸೂಚಿಗೆ ಒತ್ತು ಕೊಡುತ್ತಿದ್ದೇವೆ’ ಎಂದರು.

ರಾಮಮಂದಿರ  ನಿರ್ಮಾಣಕ್ಕೆ  ಮೋದಿ ಸರ್ಕಾರವು ಪ್ರಾಮುಖ್ಯ ನೀಡುತ್ತಿಲ್ಲವೇ ಎನ್ನುವ ಪ್ರಶ್ನೆಗೆ, ‘ಈ ವಿವಾದ ನ್ಯಾಯಾಲಯದಲ್ಲಿ ಇರುವುದು ನಿಮಗೆಲ್ಲ ಗೊತ್ತೇ ಇದೆ. ತೀರ್ಪಿಗಾಗಿ ನಾವು ಕಾಯಬೇಕಾಗುತ್ತದೆ.  ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳು  ಮಾತುಕತೆ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಆದರೆ ಎರಡೂ ಕಡೆಯಿಂದ ಈ ಪ್ರಯತ್ನ ಆಗುತ್ತಿಲ್ಲ’ ಎಂದರು.

ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನ
ಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುವುದಕ್ಕೆ ಎನ್‌ಡಿಎ ಸರ್ಕಾರಕ್ಕೆ ಅಗತ್ಯ ಬಹುಮತ
ವಿಲ್ಲ ಎಂದು ಬಿಜೆಪಿ ಅಧ್ಯಕ್ಷ  ಅಮಿತ್‌ ಷಾ ನೀಡಿದ ಹೇಳಿಕೆ ಬಗ್ಗೆಯೂ ಮಾಧ್ಯಮ ಪ್ರತಿನಿಧಿಗಳು ಪ್ರಸ್ತಾಪಿಸಿದರು.  ಆದರೆ  ಸಚಿವರು ಇದಕ್ಕೆ ಹೆಚ್ಚು ಮಹತ್ವ ಕೊಡಲಿಲ್ಲ. ‘ಜಮ್ಮು–ಕಾಶ್ಮೀರದಲ್ಲಿ ಈಗಷ್ಟೇ ಸರ್ಕಾರ ರಚನೆಯಾಗಿದೆ (ಅಭಿ ಅಭಿ ತೊ ಸರ್ಕಾರ್‌ ಬನಿ ಹೈ)’  ಎಂದು ಹಾರಿಕೆಯ ಉತ್ತರ ನೀಡಿದರು.

ಸರ್ಕಾರದಲ್ಲಿ ಆರ್ಎಸ್‌ಎಸ್‌ ಪಾತ್ರ ಏನು ಎನ್ನುವ ಮತ್ತೊಂದು ಪ್ರಶ್ನೆಗೆ  ರಾಜನಾಥ್‌ ನೇರ ಪ್ರತಿಕ್ರಿಯೆ ನೀಡಲಿಲ್ಲ.  ‘ನಾನು ಆರ್‌ಎಸ್‌ಎಸ್‌ ಸ್ವಯಂಸೇವಕ. ಅದರ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದೇನೆ’ ಎಂದು ನುಡಿದರು.

ಕಡಿಮೆ ಮಾತು ಕೆಲಸ ಹೆಚ್ಚು...
ಮೋದಿ ಸರ್ಕಾರದಲ್ಲಿ ಯಾವ ಸಚಿವರೂ ಅಸಮರ್ಥರಲ್ಲ. ಕಡಿಮೆ ಮಾತನಾಡಿ, ಹೆಚ್ಚು ಕೆಲಸ ಮಾಡಬೇಕು ಎನ್ನುವ ತತ್ವದಲ್ಲಿ ಎಲ್ಲರೂ ನಂಬಿಕೆ ಇಟ್ಟಿದ್ದಾರೆ  ಎಂದು ರಾಜನಾಥ್‌ ಸಿಂಗ್‌ ಹೇಳಿದರು.

ಮೋದಿ ಸರ್ಕಾರದಲ್ಲಿ ಸಚಿವರಿಗೆ ಅಧಿಕಾರ ಇದೆಯೇ ಎನ್ನುವ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದರು.ಮೋದಿ ತಮ್ಮ ಸಂಪುಟ ಸಚಿವರಿಗಿಂತ ಹೆಚ್ಚು ಮಾತನಾಡುತ್ತಾರಲ್ಲ ಎಂದು ಕೆಣಕುವ ರೀತಿಯಲ್ಲಿ ಇನ್ನೊಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ಅವರು ‘ಪ್ರಧಾನಿ ಅಗತ್ಯ ಸಂದರ್ಭದಲ್ಲಿ ಮಾತನಾಡುತ್ತಾರೆ. ಇನ್ನು ನನ್ನ ಮಟ್ಟಿಗೆ ಹೇಳುವುದಾದರೆ ನಾನು ಮಾತನಾಡದೆಯೂ ಪ್ರಚಾರ ಗಿಟ್ಟಿಸಿಕೊಳ್ಳಬಲ್ಲೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ADVERTISEMENT

ಕಳೆದ ಒಂದು ವರ್ಷದಲ್ಲಿ ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ಮರಳಿ  ಬಂದಿವೆ   (ಇಸ್‌ ಸರ್ಕಾರ್‌  ಮೆ ಸುಶಾಸನ್‌ ಔರ್‌ ವಿಕಾಸ್‌ ಕಿ ಘರ್‌ ವಾಪ್ಸಿ ಹುಯಿ ಹೈ) – ರಾಜನಾಥ್‌ ಸಿಂಗ್‌, ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.