ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ: ಮನಮೋಹನ್‌

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2015, 19:30 IST
Last Updated 6 ನವೆಂಬರ್ 2015, 19:30 IST

ನವದೆಹಲಿ: ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಚಿಂತನೆ ಹತ್ತಿಕ್ಕಲು ಕೆಲವು ತೀವ್ರಗಾಮಿ ಸಂಘಟನೆಗಳು ಹಿಂಸಾತ್ಮಕ ಹಾದಿ ಹಿಡಿದಿವೆ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್ ಆರೋಪಿಸಿದ್ದಾರೆ. ಇದು ಕೇವಲ ಬುದ್ಧಿಜೀವಿಗಳ ಮೇಲಿನ ಹಲ್ಲೆಯಾಗಿರದೆ, ರಾಷ್ಟ್ರದ ಮೇಲೆ ನಡೆಯುತ್ತಿರುವ ದಾಳಿಯಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.

ದೇಶದ ವೈವಿಧ್ಯತೆ, ಬಹುಸಂಸ್ಕೃತಿ, ಜಾತ್ಯತೀತತೆ ಮತ್ತು ಏಕತೆ ಉಳಿಯದಿದ್ದರೆ ಭಾರಿ ಅಪಾಯ ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಧಾರ್ಮಿಕ ಅಸಹಿಷ್ಣುತೆ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮನಮೋಹನ್‌ ಸಿಂಗ್ ಈ ಎಚ್ಚರಿಕೆ ನೀಡಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯ, ಮುಕ್ತ ಚಿಂತನೆ ಮತ್ತು ನಂಬಿಕೆಗಳ ಮೇಲೆ ತೀವ್ರಗಾಮಿ ಸಂಘಟನೆಗಳು ನಡೆಸಿರುವ ದಾಳಿಯಿಂದ ದೇಶ ಕಳವಳಕ್ಕೀಡಾಗಿದೆ. ಜಾತಿ, ಆಹಾರ ಅಥವಾ ಅಭಿಪ್ರಾಯ ಭೇದಗಳ ಕಾರಣಕ್ಕೆ ವ್ಯಕ್ತಿಗಳನ್ನು ಕೊಲ್ಲುವುದನ್ನು ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಹೇಳಿದರು.

ಸದ್ಯದಲ್ಲೇ ನಡೆಯುವ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ 125ನೇ ಜನ್ಮದಿನದ ಮುನ್ನ, ರಾಜೀವ್‌ ಗಾಂಧಿ ಸಮಕಾಲೀನ ಅಧ್ಯಯನ ಸಂಸ್ಥೆ ಏರ್ಪಡಿಸಿದ್ದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ನೆಹರೂ ಪ್ರತಿಪಾದಿಸಿದ ಮೌಲ್ಯಗಳ ಮೇಲೆ ದಾಳಿ (ದಾದ್ರಿ ಮತ್ತಿತರ ಘಟನೆಗಳು) ಗಳು ನಡೆದಿರುವ ವೇಳೆಯಲ್ಲೇ ಎರಡು ದಿನಗಳ ಈ ಸಮ್ಮೇಳನ ಸಂಘಟಿಸಲಾಗಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದಾಳಿಯನ್ನು ಪ್ರಜ್ಞಾವಂತರು ಸಾಧ್ಯವಾದಷ್ಟು ಕಠಿಣ ಶಬ್ದಗಳಲ್ಲಿ ಖಂಡಿಸಬೇಕು.  ಮನುಕುಲದ ಉಳಿವಿಗಾಗಿ ಮಾತ್ರವಲ್ಲ, ಆರ್ಥಿಕ ಪ್ರಗತಿಗೂ ಶಾಂತಿ ಅಗತ್ಯ. ಭಿನ್ನಾಭಿಪ್ರಾಯ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದರಿಂದ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಆರ್ಥಿಕ ಸುಧಾರಣೆಗಳ ರೂವಾರಿಯೂ ಆಗಿರುವ ಡಾ. ಸಿಂಗ್‌ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ‘ಮೇಡ್‌ ಇನ್‌ ಇಂಡಿಯಾ’ ಕಾರ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು ಈ ಮಾತು ಹೇಳಿದರು. ಮುಕ್ತ ವಾತಾವರಣವಿಲ್ಲದೆ, ಮುಕ್ತ ಮಾರುಕಟ್ಟೆಯೂ ಇಲ್ಲ. ಸ್ವಾತಂತ್ರ್ಯ ನೆಹರೂ ಅವರ ಕನಸಿನ ಭಾರತದ ಅಡಿಪಾಯ. ಅದು ಆತ್ಮ ಹಾಗೂ ಹೃದಯಕ್ಕೆ ಹತ್ತಿರವಾದ ವಿಷಯ. ಚಿಂತನೆ, ವಿಚಾರಗಳ ವಿನಿಮಯವಾಗದಿದ್ದರೆ ಆರ್ಥಿಕ ಸಮೃದ್ಧಿಯೂ ಅಸಾಧ್ಯ ಎಂದು ಅವರು ವಿಶ್ಲೇಷಿಸಿದರು.

ಭಾರತದ ಗಣರಾಜ್ಯದಲ್ಲಿ ಧರ್ಮ ಖಾಸಗಿ ವಿಚಾರ. ಬೇರೆಯವರ ಸ್ವಾತಂತ್ರ್ಯ ರಕ್ಷಣೆ ಸಂದರ್ಭದಲ್ಲಿ ಹೊರತುಪಡಿಸಿ ಉಳಿದಂತೆ ಸರ್ಕಾರ ಅಥವಾ ಬೇರೆಯವರು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಯಾವುದೇ ಒಂದು ಧರ್ಮ ಸಾರ್ವಜನಿಕ ನೀತಿ– ನಿಯಮ ರೂಪಿಸಲು ತಳಹದಿ ಆಗದು ಎಂದು ಅವರು ನುಡಿದರು.

ನೆಹರೂ, ಸ್ವಾತಂತ್ರ್ಯ, ಸಮಾನತೆ ಹಾಗೂ ಜಾತ್ಯತೀತತೆ ಪ್ರತಿಪಾದಿಸುತ್ತಿದ್ದರು. ಅವರ ವಿಚಾರದಲ್ಲಿ ನಂಬಿಕೆ ಇರುವವರು ದೇಶದ ಐಕ್ಯತೆ ಮತ್ತು ಸಮಗ್ರತೆ ಉಳಿಸಲು ಒಗ್ಗೂಡಬೇಕು. ಮೊದಲ ಪ್ರಧಾನ ಮಂತ್ರಿ ಈಗ ಪ್ರಸ್ತುತರಲ್ಲ ಎಂಬ ವಾದವನ್ನು ಡಾ.ಸಿಂಗ್‌ ತಳ್ಳಿಹಾಕಿದರು. ನೆಹರೂ ನಿಧನರಾಗಿ ಅರ್ಧ ಶತಮಾನ ಕಳೆದರೂ ದೇಶದ ರಾಜಕಾರಣದಲ್ಲಿ ಅವರಿಗೆ ಪ್ರಮುಖ ಸ್ಥಾನ ಸಿಗುತ್ತಿದೆ. ಇದಕ್ಕಿಂತ ಮತ್ಯಾವ ಗೌರವ ಬೇಕು ಎಂದು ಮಾಜಿ ಪ್ರಧಾನಿ ಪ್ರಶ್ನಿಸಿದರು.
*
ಸಿಂಗ್‌ಗೆ ಬಿಜೆಪಿ ತಿರುಗೇಟು
ನವದೆಹಲಿ (ಪಿಟಿಐ):
ಇತ್ತೀಚಿನ ಹಿಂಸಾಚಾರ ಪ್ರಕರಣಗಳು ‘ದೇಶದ ಮೇಲಿನ ಹಲ್ಲೆಯಂತೆ’ ಎಂಬ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಟೀಕೆಗೆ ಬಿಜೆಪಿ ತೀಕ್ಷ್ಣವಾಗಿ  ಪ್ರತಿಕ್ರಿಯಿಸಿದೆ. ‘ಹಿಂಸಾಚಾರಗಳು ನಡೆದಿರುವುದು ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಎಂಬುದನ್ನು ಸಿಂಗ್‌ ನೆನಪಿಟ್ಟುಕೊಂಡು ಪ್ರತಿಕ್ರಿಯಿಸಬೇಕಿತ್ತು’ ಎಂದಿರುವ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್‌ ಶರ್ಮಾ, ದೇಶದ ಪ್ರತಿಷ್ಠೆಯನ್ನು ಕೆಡಿಸಲು ವಿಷಮಯ ಅಭಿಯಾನದಲ್ಲಿ ಕಾಂಗ್ರೆಸ್‌ ತೊಡಗಿದೆ ಎಂದು ಇಲ್ಲಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.