ನವದೆಹಲಿ (ಪಿಟಿಐ): 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೋಮವಾರ ಪ್ರಕಟಗೊಂಡಿದ್ದು, ಬಾಲಿವುಡ್ ಬಿಗ್‌ಬಿ ಅಮಿತಾಭ್ ಬಚ್ಚನ್ ಹಾಗೂ ಬಾಲಿವುಡ್ ನಟಿ ಕಂಗನಾ ರನೋಟ್ ಅವರು ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ‘ತಿಥಿ’ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ಜಯಿಸಿದೆ.
‘ಪಿಕು’ ಚಿತ್ರದ ನಟನೆಗಾಗಿ ಅಮಿತಾಭ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಅಮಿತಾಭ್ ಅವರಿಗೆ ಸಂದ ನಾಲ್ಕನೇ ರಾಷ್ಟ್ರೀಯ ಪ್ರಶಸ್ತಿ ಇದಾಗಿದೆ.
ಇನ್ನು, 29 ವರ್ಷದ ಕಂಗನಾ ಅವರು ‘ತನು ವೆಡ್ಸ್ ಮನು ರಿಟರ್ನ್ಸ್’ ಚಿತ್ರದಲ್ಲಿನ ಅಭಿನಯಕ್ಕಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇದು ಅವರಿಗೆ ಸಂದ ಮೂರನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ.
ಕಳೆದ ವರ್ಷ ಕ್ವೀನ್ ಚಿತ್ರದ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದಿದ್ದ ಕಂಗನಾ, 2009ರಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗೆದ್ದಿದ್ದರು.
ಬ್ಲಾಕ್ ಹಾಗೂ ಪಾ ಚಿತ್ರಗಳ ಅಭಿನಯಕ್ಕಾಗಿ ಬಚ್ಚನ್ ಅವರು ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದರು.
ಬಹು ಭಾಷಿಕ ಬ್ಲಾಕ್‌ಬಸ್ಟರ್ ಚಿತ್ರ ‘ಬಾಹುಬಲಿ’ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಜತೆಗೆ ಅತ್ತ್ಯುತ್ತಮ ‘ಸ್ಪೆಷಲ್ ಎಫೆಕ್ಟ್ಸ್’ ವಿಭಾಗದಲ್ಲಿಯೂ ಬಾಹುಬಲಿ ಪ್ರಶಸ್ತಿ ಗೆದ್ದಿದೆ.
ಇನ್ನು, ‘ಬಾಜಿರಾವ್ ಮಸ್ತಾನಿ’ ಚಿತ್ರ ನಿರ್ದೇಶನಕ್ಕಾಗಿ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಂದಿದೆ.
ಸಲ್ಮಾನ್ ಖಾನ್ ನಟನೆಯ ಭಜರಂಗಿ ಭಾಯಿಜಾನ್ ಚಿತ್ರಕ್ಕೆ ಅತ್ಯುತ್ತಮ ಕೌಟುಂಬಿಕ ಮನರಂಜನಾ’ ಚಿತ್ರ ಪ್ರಶಸ್ತಿ ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.