ಬೆಂಗಳೂರು: ಎನ್‌ಡಿಎ ಸರ್ಕಾರದ ಆರ್ಥಿಕ ನೀತಿಗಳನ್ನು ಬಿಜೆಪಿಯ ಹಿರಿಯ ನಾಯಕ, ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಟೀಕಿಸಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ದೇಶದ ಅರ್ಥವ್ಯವಸ್ಥೆ ಹದಗೆಟ್ಟಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ಬರೆದ ಲೇಖನದಲ್ಲಿ ಅವರು ಉಲ್ಲೇಖಿಸಿದ್ದಾರೆ.
‘ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೇಶದ ಅರ್ಥ ವ್ಯವಸ್ಥೆಯಲ್ಲಿ ಸೃಷ್ಟಿಸಿದ ಅವ್ಯವಸ್ಥೆ ಬಗ್ಗೆ ಈಗಲಾದರೂ ಮಾತನಾಡದಿದ್ದರೆ ಸಾಮಾಜಿಕ ಕರ್ತವ್ಯ ನಿರ್ವಹಿಸುವಲ್ಲಿ ನಾನು ವಿಫಲನಾದಂತೆ’ ಎಂದು ಅವರು ಲೇಖನದಲ್ಲಿ ಬರೆದಿದ್ದಾರೆ.
‘ನಾವು ಪ್ರತಿಪಕ್ಷದ ಸ್ಥಾನದಲ್ಲಿದ್ದಾಗ ‘ರೈಡ್ ರಾಜ್ (ತನಿಖಾ ಸಂಸ್ಥೆಗಳು ನಡೆಸುವ ಅವ್ಯಾಹತ ದಾಳಿ)’ ಅನ್ನು ವಿರೋಧಿಸಿದ್ದೆವು. ಇಂದು ಇದು ದೈನಂದಿನ ಚಟುವಟಿಕೆಯಾಗಿಬಿಟ್ಟಿದೆ. ದೊಡ್ಡ ಮುಖ ಬೆಲೆಯ ನೋಟು ರದ್ದತಿ ನಂತರ ಹತ್ತಾರು ಲಕ್ಷ ಜನರಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸುವ ಹೊಣೆಯನ್ನು ಆದಾಯ ತೆರಿಗೆ ಇಲಾಖೆಗೆ ವಹಿಸಲಾಗಿದೆ. ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೂ ಈ ಕರ್ತವ್ಯವನ್ನು ವಹಿಸಲಾಗಿದೆ. ಬಡತನವನ್ನು ಹತ್ತಿರದಿಂದ ನೋಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಆದರೆ, ಅವರದ್ದೇ ಸಂಪುಟದ ಹಣಕಾಸು ಸಚಿವ ಅರುಣ್ ಜೇಟ್ಲಿ ಎಲ್ಲ ಭಾರತೀಯರನ್ನು ಒಂದೇ ರೀತಿ ನೋಡುತ್ತಾರೆ’ ಎಂದು ಸಿನ್ಹಾ ಹೇಳಿದ್ದಾರೆ.
‘ಭಾರತದ ಸದ್ಯದ ಅರ್ಥ ವ್ಯವಸ್ಥೆ ಹೇಗಿದೆ? ಖಾಸಗಿ ಹೂಡಿಕೆ ಪ್ರಮಾಣ ಎರಡು ದಶಕಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಕೈಗಾರಿಕಾ ಉತ್ಪಾದನೆ ಕುಂಠಿತವಾಗಿದೆ. ಕೃಷಿ ಕ್ಷೇತ್ರ ಭಾರಿ ಒತ್ತಡಕ್ಕೆ ಸಿಲುಕಿದೆ. ಕಟ್ಟಡ ನಿರ್ಮಾಣ ಉದ್ಯಮ, ಸೇವಾ ಕ್ಷೇತ್ರದ ಚಟುವಟಿಕೆಗಳು ಮಂದಗತಿಯಲ್ಲಿ ಸಾಗುತ್ತಿವೆ. ರಫ್ತು ಪ್ರಮಾಣ ಕ್ಷೀಣಿಸಿದೆ. ಒಟ್ಟು ಅರ್ಥವ್ಯವಸ್ಥೆಯೇ ಒತ್ತಡಕ್ಕೆ ಸಿಲುಕಿದೆ. ದೊಡ್ಡ ಮುಖಬೆಲೆಯ ನೋಟು ರದ್ದತಿಯು ಆರ್ಥಿಕ ವಿಪತ್ತನ್ನು ಸಾಬೀತುಪಡಿಸಿದೆ. ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಅಸಮರ್ಪಕ ಜಾರಿಯಿಂದಾಗಿ ಅನೇಕ ಮಂದಿ ಉದ್ಯೋಗ ಕಳೆದುಕೊಳ್ಳುವಂತಾಗಿದೆ. ಆರ್ಥಿಕ ಬೆಳವಣಿಗೆ ದರವೂ ಕುಸಿದಿದೆ. ನೋಟು ರದ್ದತಿಯು ಆರ್ಥಿಕ ಕುಸಿತಕ್ಕೆ ಕಾರಣವಲ್ಲ ಎಂದು ಸರ್ಕಾರದ ವಕ್ತಾರರು ಹೇಳುತ್ತಿದ್ದಾರೆ. ಹೌದು, ಆರ್ಥಿಕ ವಿಘಟನೆಯು ಬಹಳ ಹಿಂದೆಯೇ ಶುರುವಾಗಿತ್ತು. ಈ ಬೆಂಕಿಗೆ ನೋಟು ರದ್ದತಿಯು ತುಪ್ಪ ಸುರಿಯಿತು’ ಎಂದು ಸಿನ್ಹಾ ಬರೆದಿದ್ದಾರೆ. ಪಾವತಿಯಾಗದ ಸಾಲದ ಪ್ರಮಾಣ, ತೈಲ ಬೆಲೆ ಮತ್ತಿತರ ವಿಷಯಗಳ ಬಗ್ಗೆಯೂ ಸಿನ್ಹಾ ಪ್ರಸ್ತಾಪಿಸಿದ್ದಾರೆ.
ಅರುಣ್ ಜೇಟ್ಲಿ ಅವರು ಅಮೃತಸರ ಲೋಕಸಭಾ ಕ್ಷೇತ್ರದಲ್ಲಿ ಸೋಲನುಭವಿಸಿದ್ದರೂ ಅವರನ್ನು ರಾಜ್ಯಸಭೆಯಿಂದ ಆರಿಸಿ ಸಚಿವರನ್ನಾಗಿಸಿದ ಬಗ್ಗೆಯೂ ಸಿನ್ಹಾ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಇಂಥದ್ದೇ ಸನ್ನಿವೇಶದಲ್ಲಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಆಪ್ತರಾದ ಜಸ್ವಂತ್ ಸಿಂಗ್ ಮತ್ತು ಪ್ರಮೋದ್ ಮಹಾಜನ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು ಎಂದೂ ಸಿನ್ಹಾ ಹೇಳಿದ್ದಾರೆ.
ಸಿನ್ಹಾ ಲೇಖನವನ್ನು ಉಲ್ಲೇಖಿಸಿ ಪ್ರತಿಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ‘ಅಧಿಕಾರದಲ್ಲಿರುವವರಿಗೆ ಸಿನ್ಹಾ ಅವರು ಸತ್ಯವನ್ನು ಹೇಳಿದ್ದಾರೆ. ಆರ್ಥಿಕತೆ ಕುಸಿಯುತ್ತಿದೆ ಎಂಬ ಸತ್ಯವನ್ನು ಆಡಳಿತ ಈಗಲಾದರೂ ಒಪ್ಪಿಕೊಳ್ಳಲಿದೆಯೇ? ಎಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.