ನವದೆಹಲಿ: ಗಾಯಕ ಸೋನು ನಿಗಮ್ ಅವರು ಆಜಾನ್ (ಮುಸಲ್ಮಾನರ ಬೆಳಗಿನ ಪ್ರಾರ್ಥನೆ) ಕುರಿತಾಗಿ ಟ್ವೀಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಉಂಟಾಗಿರುವ ವಿವಾದಕ್ಕೆ ಸಿನಿ ಮಂದಿ ಈಗ ಪ್ರತಿಕ್ರಿಯೆ ನೀಡಿದ್ದಾರೆ.
ವಿವಾದದ ಕುರಿತು ಮಾತನಾಡಿರುವ ಬಾಲಿವುಡ್ ನಟಿ ಕಂಗನಾ ರನೋಟ್, ‘ಆಜಾನ್‌ನಿಂದ ನನಗೆ ತೊಂದರೆಯೇನೂ ಆಗಿಲ್ಲ. ನಾನು ಆ ಸದ್ದನ್ನು ಪ್ರೀತಿಸಿದ್ದೇನೆ’ ಎಂದಿದ್ದಾರೆ.
‘ನಾನು ಯಾರೊಬ್ಬರ ಬಗ್ಗೆಯೂ ಮಾತನಾಡುವುದಿಲ್ಲ. ನಾನು ಆಜಾನ್‌ನ್ನು ಯಾವಾಗಲೂ ಇಷ್ಟಪಡುತ್ತೇನೆ. ಲಖನೌನಲ್ಲಿ ಶೂಟಿಂಗ್‌ನಲ್ಲಿದ್ದ ವೇಳೆ ಆಜಾನ್ ಸದ್ದು ಕೇಳಿ ಖುಷಿಪಟ್ಟಿದ್ದೇನೆ. ನನಗೆ ಮಸೀದಿ, ಚರ್ಚ್, ಮಂದಿರ, ಗುರುದ್ವಾರಗಳೆಂಬ ಭೇದ ಇಲ್ಲ. ಈ ಎಲ್ಲಾ ಕಡೆ ನಾನು ಭೇಟಿ ನೀಡುತ್ತೇನೆ’ ಎಂದು ಕಂಗನಾ ಹೇಳಿದ್ದಾರೆ.
‘ಸೋನು ನಿಗಮ್ ಅವರು ಆಜಾನ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರ ಅಭಿಪ್ರಾಯ ಹೇಳಿಕೊಳ್ಳಲು ಅವರಿಗೆ ಸ್ವಾತಂತ್ರ್ಯವಿದೆ. ಅವರ ಅಭಿಪ್ರಾಯವನ್ನು ನಾವು ಗೌರವಿಸಬೇಕು’ ಎಂದಿದ್ದಾರೆ.
‘ನಾನು ಮುಸ್ಲಿಂ ಅಲ್ಲದಿದ್ದರೂ ಬೆಳಗ್ಗಿನ ಪ್ರಾರ್ಥನಾ ಸಮಯಕ್ಕೆ (ಅಜಾನ್) ಏಳಬೇಕಿದೆ. ಇಂತಹ ಒತ್ತಾಯಪೂರ್ವಕ ಧಾರ್ಮಿಕ ಆಚರಣೆ ಭಾರತದಲ್ಲಿ ಯಾವಾಗ ಕೊನೆಯಾಗಲಿದೆ’ ಎಂದು ಸೋನು ನಿಗಮ್ ಏ. 17ರ ಬೆಳಗ್ಗೆ 5.25ಕ್ಕೆ ಟ್ವೀಟ್ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಆಜಾನ್ ಬಗ್ಗೆ ಮಾತನಾಡಿದ ಸೋನು ನಿಗಮ್ ಅವರ ಮೇಲೆ ಕಿಡಿಕಾರಿದ್ದ ಪಶ್ಚಿಮ ಬಂಗಾಳ ಅಲ್ಪಸಂಖ್ಯಾತ ಒಕ್ಕೂಟದ ಉಪಾಧ್ಯಕ್ಷರಾದ ಸಯ್ಯದ್ ಶಾ ಅತೀಫ್ ಅಲಿ ಅಲ್ ಖಾದ್ರಿ ಅವರು, ‘ಸೋನು ನಿಗಮ್ ಅವರ ತಲೆ ಬೋಳಿಸಿ, ಅವರ ಕೊರಳಿಗೆ ಹಳೆಯ ಬೂಟುಗಳ ಹಾರ ಹಾಕಿ ಅವರನ್ನು ದೇಶದಾದ್ಯಂತ ಮೆರವಣಿಗೆ ಮಾಡಿದವರಿಗೆ ₹ 10 ಲಕ್ಷ ಬಹುಮಾನ ನೀಡುವೆ’ ಎಂದು ಘೋಷಿಸಿದ್ದರು.
ಇವರ ಸವಾಲನ್ನು ಸ್ವೀಕರಿಸಿದ್ದ ಸೋನು ನಿಗಮ್ ತಮ್ಮ ತಲೆಬೋಳಿಸಿಕೊಂಡಿದ್ದರು.