ADVERTISEMENT

ಇಂದಿನಿಂದ 5 ದಿನ ‘ಜೈಪುರ ಸಾಹಿತ್ಯ ಹಬ್ಬ’

ಚ.ಹ.ರಘುನಾಥ
Published 20 ಜನವರಿ 2015, 19:30 IST
Last Updated 20 ಜನವರಿ 2015, 19:30 IST

ಜೈಪುರ: ಏಷ್ಯಾದ ಅತ್ಯಂತ ದೊಡ್ಡ ಸಾಹಿತ್ಯಿಕ ಹಬ್ಬ ಎನ್ನುವ ಖ್ಯಾತಿಯ ‘ಜೈಪುರ ಲಿಟರೇಚರ್‌ ಫೆಸ್ಟಿವಲ್‌ 2015’ (ಜೆಎಲ್‌ಎಫ್‌) ಇಂದಿನಿಂದ ಐದು ದಿನಗಳ ಕಾಲ ಇಲ್ಲಿ ನಡೆಯಲಿದೆ. ಭಾರತೀಯ ಲೇಖಕರೂ ಸೇರಿದಂತೆ ವಿಶ್ವದ ವಿವಿಧ ಭಾಗಗಳ ಎಪ್ಪತ್ತಕ್ಕೂ ಹೆಚ್ಚು ಖ್ಯಾತ ಬರಹಗಾರರು ಪಾಲ್ಗೊಳ್ಳುವುದು ಈ ಉತ್ಸವದ ವಿಶೇಷ.

ಕನ್ನಡ, ತಮಿಳು, ತೆಲುಗು, ಮರಾಠಿ, ಉರ್ದು, ಮಣಿಪುರಿ, ಹಿಂದಿ, ಸಂಸ್ಕೃತ ಹಾಗೂ ಪಾಲಿ ಭಾಷೆಗಳ ಲೇಖಕರು ಭಾರತೀಯ ಸಾಹಿತ್ಯವನ್ನು ಪ್ರತಿನಿಧಿಸಲಿ­ದ್ದಾರೆ. ಗಿರೀಶ ಕಾರ್ನಾಡ್‌, ರಘು ಕಾರ್ನಾಡ್‌ ಹಾಗೂ ಸುಧಾಮೂರ್ತಿ ಸಾಹಿತ್ಯಿಕ ಗೋಷ್ಠಿಗಳಲ್ಲಿ­ರುವ ಕನ್ನಡಿಗರು.

ವಿ.ಎಸ್‌. ನೈಪಾಲ್‌, ಎಲೆನಾರ್‌ ಕ್ಯಾಟನ್‌ (Elenor Catton), ಅಮಿಶ್‌ ತ್ರಿಪಾಠಿ, ಜಾವೇದ್‌ ಅಖ್ತರ್‌, ಖುರೇಶಿ, ನೀಲ್‌ ಮುಖರ್ಜಿ, ಕೇದಾರ್‌­ನಾಥ್‌ ಸಿಂಗ್‌, ಸ್ವಪನ್‌ ದಾಸ್‌ಗುಪ್ತ, ಮೀನಾ ಕಂದಸ್ವಾಮಿ, ಅಶೋಕ್‌ ವಾಜಪೇಯಿ, ಹನೀಫ್‌ ಖುರೇಶಿ, ಶಶಿ ತರೂರ್‌, ತರುಣ್‌ ವಿಜಯ್‌ ಉತ್ಸವದಲ್ಲಿ ಭಾಗಿಯಾಗುತ್ತಿರುವ ಕೆಲವು ಪ್ರಮುಖರು. ಇವರ ಜೊತೆಗೆ ಸಂಗೀತ–ಕಲಾಕ್ಷೇತ್ರದ ನಾಸಿರುದ್ದೀನ್‌ ಶಾ, ಶಬಾನಾ ಅಜ್ಮಿ , ವಹೀದಾ ರೆಹಮಾನ್‌ ಮುಂತಾ­ದವರು ಗೋಷ್ಠಿಗಳ ಆಕರ್ಷಣೆಯಾಗಿದ್ದಾರೆ.

ಐತಿಹಾಸಿಕ ಡಿಗ್ಗಿ ಪ್ಯಾಲೆಸ್‌ನ ಪ್ರಧಾನ ವೇದಿಕೆ ಹಾಗೂ ಇತರ ಪರ್ಯಾಯ ವೇದಿಕೆಗಳಲ್ಲಿ ಪುಸ್ತಕಗಳ ಓದು, ಚರ್ಚೆ, ಸಂವಾದ, ಕಲಾ ಪ್ರದರ್ಶನ ಕಾರ್ಯ­ಕ್ರಮಗಳಿಗೆ ಈ ಸಾಹಿತ್ಯ ಹಬ್ಬ ಸಾಕ್ಷಿಯಾಗಲಿದೆ.

ಉತ್ತಮ ಸಾಹಿತ್ಯದ ಕನ್ನಡಿ: ಜಾಗತಿಕ ಮತ್ತು ದೇಸಿ ಪರಿಕಲ್ಪನೆ ಎರಡರ ಸಮನ್ವಯವನ್ನು ಸಾಧಿಸುವ ಪ್ರಯತ್ನ ಇದಾಗಿದ್ದು, ದಕ್ಷಿಣ ಏಷ್ಯಾ ಸಾಹಿತ್ಯದ ಜೊತೆಗೆ ವಿಶ್ವದ ಅತ್ಯು­ತ್ತಮ ಸಾಹಿತ್ಯದ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಉತ್ಸವದಲ್ಲಿ ನಡೆಯ­ಲಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಸಂಘಟಕರು ತಿಳಿಸಿದ್ದಾರೆ.

ಪ್ರಚಲಿತ ವಿದ್ಯಮಾನಗಳ ಹಿನ್ನೆಲೆ­ಯಲ್ಲಿ ಸಾಹಿತ್ಯ ಹಾಗೂ ಸಾಹಿತ್ಯದ ನಾಳೆಗಳ ಕುರಿತು ಉತ್ಸವದ ಗೋಷ್ಠಿ­ಗಳಲ್ಲಿ ಬೆಳಕು ಚೆಲ್ಲುವ ಪ್ರಯತ್ನ ನಡೆಯಲಿದೆ. ರಾಜಸ್ತಾನದ ಇತಿಹಾಸ, ಪರಂಪರೆ, ವಾಸ್ತುಶಿಲ್ಪ, ಸಂಗೀತ ಹಾಗೂ ಪ್ರವಾಸೋದ್ಯಮ­ವನ್ನು ಪ್ರತಿನಿಧಿ­ಸುವ ಕಾರ್ಯಕ್ರಮಗಳ ಮೂಲಕ ರಾಜಸ್ತಾನಿ ಸಂಸ್ಕೃತಿ­ಯನ್ನು ಬಿಂಬಿಸುವ ಪ್ರಯತ್ನ­ಗಳು  ಐದು ದಿನವೂ ನಡೆಯಲಿವೆ.

ಪುಸ್ತಕದ ಹೊಸ ಸಾಧ್ಯತೆಗಳು: ಓದು ಮತ್ತು ಪುಸ್ತಕ ಪ್ರಕಟಣೆ ಸಾಧ್ಯತೆಗಳ ಕುರಿತು ಬೆಳಕು ಚೆಲ್ಲುವುದು ಈ ವರ್ಷದ ಉತ್ಸವದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

ಪ್ರತಿ ವರ್ಷವೂ ಜೈಪುರ ಸಾಹಿತ್ಯ ಉತ್ಸವ ಪುಸ್ತಕ ಪ್ರೇಮಿಗಳನ್ನು ಮಾತ್ರವಲ್ಲದೆ, ಪ್ರಕಾಶಕರು ಹಾಗೂ ಇತರ ಕ್ಷೇತ್ರಗಳ ಪರಿಣತರನ್ನೂ ಆಕರ್ಷಿಸುತ್ತಿದೆ. ಈ ಮೂಲಕ ‘ಜೈಪುರ ಬುಕ್‌ಮಾರ್ಕ್‌’ಗೆ ಅಂತರ­ರಾಷ್ಟ್ರೀಯ ಪ್ರಕಾಶನ ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸು ದೊರೆತಿದೆ.

ಪ್ರಸ್ತುತ ಉತ್ಸವದಲ್ಲಿ ಪುಸ್ತಕ ಪ್ರಕಟಣೆ ಕ್ಷೇತ್ರ­ದಲ್ಲಿ ಹೆಸರು ಮಾಡಿರುವ ವಿಶ್ವದ ವಿವಿಧ ಭಾಗ­ಗಳ ಪರಿಣತರು ಭಾಗವಹಿಸುತ್ತಿದ್ದಾರೆ. ದಕ್ಷಿಣ ಏಷ್ಯಾವನ್ನು ಕೇಂದ್ರವಾಗಿಸಿಕೊಂಡು, ಪುಸ್ತಕ ಪ್ರಕಟ­ಣೆಗೆ ಸಂಬಂಧಿಸಿ­ದಂತೆ ವಿಶ್ವದ ವಿವಿಧ ಭಾಗಗಳಲ್ಲಿ ನಡೆದಿರುವ ಪ್ರಯೋಗಗಳಿಗೆ ಉತ್ಸವ ಕನ್ನಡಿಯಾಗ­ಲಿದೆ. ಲೇಖಕರು, ಪ್ರಕಾಶಕರು ಹಾಗೂ ಮಾರಾಟ­ಗಾರರು ಪರಸ್ಪರ ಭೇಟಿಯಾ­ಗಲು, ಚರ್ಚಿಸಲು ಕೂಡ ಈ ವೇದಿಕೆ ಅವಕಾಶ ಕಲ್ಪಿಸುತ್ತಿದೆ.

ಮುದ್ರಣ, ವಿನ್ಯಾಸ ಹಾಗೂ ಮಾರುಕಟ್ಟೆ ಕ್ಷೇತ್ರಗಳಲ್ಲಿ ದಕ್ಷಿಣ ಏಷ್ಯಾ ವಿಶ್ವದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿದ್ದು, 24 ಭಾರತೀಯ ಭಾಷೆಗಳನ್ನು ಒಳಗೊಂಡಂತೆ, ದಕ್ಷಿಣ ಏಷ್ಯಾದ ಒಟ್ಟು 30 ಭಾಷೆಗಳಲ್ಲಿ ಪ್ರಸ್ತುತ ಪುಸ್ತಕ ಪ್ರಕಟಣೆ ಚಟುವಟಿಕೆಗಳು ನಡೆಯುತ್ತಿವೆ. ಇವುಗಳಲ್ಲಿ ಪ್ರತಿ ಭಾಷೆಯೂ ತನ್ನದೇ ಆದ ಮುದ್ರಣ ಮತ್ತು ಪ್ರಕಟ­ಣೆಯ ಸಂಸ್ಕೃತಿಯನ್ನು ಹೊಂದಿರುವುದು ವಿಶೇಷ. ಈ ವಿಶಿಷ್ಟ ಸಾಧನೆಯನ್ನು ಉತ್ಸವ ಪ್ರತಿಬಿಂಬಿಸಲಿದೆ. ಮುದ್ರಣ–ಪ್ರಕಟಣೆ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳ ಬಗ್ಗೆ ಇಲ್ಲಿ ಚರ್ಚೆ ನಡೆಯಲಿದೆ.

ಅರ್ಥಪೂರ್ಣತೆಗೆ ಒತ್ತು: 2006ರಿಂದ ಪ್ರತಿ ವರ್ಷ ನಡೆಯುತ್ತಿರುವ ಈ ಉತ್ಸವವನ್ನು ವರ್ಷ­ದಿಂದ ವರ್ಷಕ್ಕೆ ಉತ್ತಮಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ‘ಇದು ವೈಚಾರಿಕ ಕ್ಷೇತ್ರದ ಒಂದು ಅದ್ಭುತ ವಿದ್ಯಮಾನವಾಗಿದೆ’ ಎಂದು ಸಾಹಿತಿ ಹಾಗೂ ಉತ್ಸವದ ಸಹ ನಿರ್ದೇಶಕರಾದ ನಮಿತಾ ಗೋಖಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರಂಭದ ವರ್ಷಗಳಲ್ಲಿ ಭಾರತೀಯ ಸಾಹಿತ್ಯ ವಲಯದ ಗಮನಸೆಳೆದಿದ್ದ ‘ಜೆಎಲ್‌ಎಫ್‌’, ವಿಶ್ವದ ಗಮನಸೆಳೆದಿದ್ದು 2012ರಲ್ಲಿ. ಆ ವರ್ಷದ ಪ್ರಮುಖ ಆಹ್ವಾನಿತರಾಗಿದ್ದ ‘ಸಟಾನಿಕ್‌ ವರ್ಸಸ್‌’ ಕೃತಿ ಖ್ಯಾತಿಯ ಸಲ್ಮಾನ್‌ ರಷ್ದಿ ಅವರು, ತಮ್ಮ ಸುರಕ್ಷತೆಗೆ ಸಂಬಂಧಿಸಿದಂತೆ ಪೊಲೀಸರು ನೀಡಿದ ಮುನ್ನೆಚ್ಚರಿಕೆ ಮೇರೆಗೆ ಭಾರತ ಭೇಟಿಯನ್ನು ರದ್ದು­ಪಡಿಸಿದ್ದರು. ಈ ಘಟನೆ ವಿಶ್ವದಾದ್ಯಂತ ಸುದ್ದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.