ADVERTISEMENT

ಇಂದು ಸೋನಿಯಾ–ಮಾಯಾವತಿ ಭೇಟಿ?

ವಿಪಕ್ಷಗಳ ಒಗ್ಗೂಡಿಸಲು ಮುಂದುವರಿದ ನಾಯ್ಡು ಯತ್ನ

​ಪ್ರಜಾವಾಣಿ ವಾರ್ತೆ
Published 20 ಮೇ 2019, 1:25 IST
Last Updated 20 ಮೇ 2019, 1:25 IST
   

ನವದೆಹಲಿ: ಲೋಕಸಭೆಗೆ ಮತದಾನಪ್ರಕ್ರಿಯೆ ಕೊನೆಗೊಂಡ ತಕ್ಷಣವೇ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮುಂದಾಗಿದ್ದು, ಪ್ರತಿಪಕ್ಷ ನಾಯಕರ ಸಾಲಿನಲ್ಲಿ ಪ್ರಮುಖರಾಗಿರುವ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರನ್ನು ಸೋಮವಾರ ಭೇಟಿಯಾಗುವ ಸಂಭವವಿದೆ.

ಚುನಾವಣೆ ಪ್ರಕ್ರಿಯೆ ಆರಂಭವಾದ ನಂತರ ಮಾಯಾವತಿ ಇದೇ ಮೊದಲ ಬಾರಿಗೆ ರಾಜಧಾನಿಗೆ ಭೇಟಿ ನೀಡುತ್ತಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕೆಲಸವನ್ನು ಈಗಾಗಲೇ ಆರಂಭಿಸಿದ್ದಾರೆ. ಹಲವು ಮುಖಂಡರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ADVERTISEMENT

ಮಾಯಾವತಿ ಮತ್ತು ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರನ್ನುಶನಿವಾರ ಭೇಟಿಯಾಗಿದ್ದ ನಾಯ್ಡು ಅವರು, ಭಾನುವಾರ ದೆಹಲಿಯಲ್ಲಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರನ್ನು ಭೇಟಿಯಾಗಿ ಚರ್ಚೆಯ ಫಲಶ್ರುತಿ ವಿವರಿಸಿದ್ದರು.

ಸೋನಿಯಾಗಾಂಧಿ ಅವರು ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರಾದ ಅಹ್ಮದ್ ಪಟೇಲ್, ಎ.ಕೆ.ಆಂಟನಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರೊಂದಿಗೆ ರಾಜಕೀಯ ಬೆಳವಣಿಗೆಗಳನ್ನು ಕುರಿತು ಚರ್ಚೆ ನಡೆಸಿದರು.

ಮತಗಟ್ಟೆ ಸಮೀಕ್ಷೆಗಳು ಎನ್‌ಡಿಎಗೆ ಸ್ಪಷ್ಟ ಬಹುಮತ ಬರಬಹುದು ಎಂದು ಅಂದಾಜು ಮಾಡಿದ್ದರೂ, ವಿರೋಧಪಕ್ಷಗಳು ಇದರಲ್ಲಿ ಬಿಜೆಪಿಯ ಸಂಖ್ಯೆ 190ರಿಂದ 200ರಷ್ಟು ಇರಬಹುದು ಎಂದು ಅಂದಾಜು ಮಾಡಿವೆ. ಈ ಹಿನ್ನೆಲೆಯಲ್ಲಿ ಬಿಜೆಡಿಯ ನವೀನ್‌ ಪಟ್ನಾಯಕ್‌, ಟಿಆರ್‌ಎಸ್‌ನ ಕೆ.ಚಂದ್ರಶೇಖರರಾವ್‌, ವೈಎಸ್ಆರ್‌ ಕಾಂಗ್ರೆಸ್‌ನ ಜಗನ್‌ ಮೋಹನ್‌ ರೆಡ್ಡಿ ಕೈಗೊಳ್ಳಬಹುದಾದ ತೀರ್ಮಾನವನ್ನು ವಿಪಕ್ಷಗಳ ಮುಖಂಡರು ಗಮನಿಸುತ್ತಿದ್ದಾರೆ.

ಚಂದ್ರಬಾಬು ನಾಯ್ಡು ಅವರು, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಲೋಕತಾಂತ್ರಿಕ ಜನತಾದಳ ನಾಯಕ ಶರದ್‌ ಯಾದವ್, ಎಎಪಿ ನಾಯಕ ಸಂಜಯ್‌ ಸಿಂಗ್, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್ ಅವರನ್ನು ಭಾನುವಾರ ಭೇಟಿ ಮಾಡಿ ಚರ್ಚಿಸಿದರು. ಕಾಂಗ್ರೆಸ್‌ನ ಸಂಖ್ಯಾಬಲ 100ರ ಗಡಿ ದಾಟದೇ ಇದ್ದರೆ ಮಾಯಾವತಿ ಅವರು ಪ್ರಧಾನಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಕಾರಣ ಮಾಯಾವತಿ –ಸೋನಿಯಾ ಅವರ ಸೋಮವಾರದ ಭೇಟಿ ಕುತೂಹಲ ಕೆರಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.