ADVERTISEMENT

ಇಬ್ಬರು ಭಾರತೀಯರಿಗೆ ಮ್ಯಾಗ್ಸೆಸೆ ಗೌರವ

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 6:34 IST
Last Updated 29 ಜುಲೈ 2015, 6:34 IST

ನವದೆಹಲಿ (ಏಜೆನ್ಸೀಸ್‌): ‘ಗೂಂಜ್‌’ ಸ್ವಯಂ ಸೇವಾ ಸಂಸ್ಥೆಯ ಸಂಸ್ಥಾಪಕ ಅಂಶು ಗುಪ್ತಾ ಮತ್ತು ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್‌) ಅಧಿಕಾರಿ ಸಂಜೀವ್‌ ಚತುರ್ವೇದಿ ಅವರಿಗೆ ಈ ಬಾರಿಯ ರಾಮನ್‌ ಮ್ಯಾಗ್ಸೆಸೆ ಗೌರವ ಸಂದಿದೆ.

‘ವಸ್ತ್ರದಿಂದ ಸುಸ್ಥಿರ ಅಭಿವೃದ್ಧಿ ಎಂಬ ಧ್ಯೇಯದಿಂದ ಕೆಲಸ ಮಾಡುತ್ತಿರುವ ಗೂಂಜ್ ಸಂಸ್ಥೆಯ ಅಂಶು ಗುಪ್ತಾ ಮತ್ತು ಸರ್ಕಾರಿ ಸೇವೆಯಲ್ಲಿದ್ದು ವ್ಯವಸ್ಥೆಯಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆದ ಕಾರ್ಯಕ್ಕಾಗಿ ಸಂಜೀವ್‌ ಚತುರ್ವೇದಿ ಅವರನ್ನು ಮ್ಯಾಗ್ಸೆಸೆ ಗೌರವಕ್ಕೆ ಆಯ್ಕೆ ಮಾಡಲಾಗಿದೆ’ ಎಂದು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನ ತಿಳಿಸಿದೆ.

1999ರಲ್ಲಿ ಆರಂಭಗೊಂಡ ಗೂಂಜ್ ಸಂಸ್ಥೆಯು ಹಳೆಯ ಬಟ್ಟೆಯ ಪುನರ್ಬಳಕೆಯ ಮೂಲಕ ಅನೇಕ ಮಂದಿ ಬಡಜನರು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಕರ್ನಾಟಕವೂ ಸೇರಿದಂತೆ ದೇಶದ 21 ರಾಜ್ಯಗಳಲ್ಲಿ ಗೂಂಜ್‌ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ADVERTISEMENT

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್‌) ಮುಖ್ಯ ವಿಚಕ್ಷಣ ಆಯುಕ್ತರಾಗಿದ್ದ ಸಂಜೀವ್‌ ಚತುರ್ವೇದಿ ಅವರನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಏಮ್ಸ್‌ನಿಂದ ವರ್ಗಾವಣೆ ಮಾಡಲಾಗಿತ್ತು. ಏಮ್ಸ್‌ನಲ್ಲಿನ ಅಕ್ರಮಗಳನ್ನು ಹೊರಗೆಳೆದ ಕಾರಣಕ್ಕೆ ತಮ್ಮನ್ನು ವರ್ಗಾವಣೆ ಮಾಡಲಾಗಿದೆ ಎಂದು ಸಂಜೀವ್‌ ಚತುರ್ವೇದಿ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.