ಆಲಿಘರ್ (ಉತ್ತರಪ್ರದೇಶ): ಸಾಲ ಮರುಪಾವತಿಸಲಿಲ್ಲ ಎಂಬ ಕಾರಣಕ್ಕಾಗಿ ಮೂರು ವರ್ಷದ ಹೆಣ್ಣು ಮಗುವನ್ನು ಹತ್ಯೆ ಮಾಡಿ ಕಣ್ಣು ಕಿತ್ತ ಅಮಾನುಷ ಘಟನೆಗೆ ಸಂಬಂಧಿಸಿದಂತೆ ಐದು ಮಂದಿ ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಇದಲ್ಲದೆ, ಆರೋಪಿಗಳನ್ನು ಬಂಧಿಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಆಲಿಘರ್‌ನಿಂದ 50 ಕಿಲೋ ಮೀಟರ್ ದೂರದಲ್ಲಿರುವ ತಪ್ಪಾಲ್ ನಗರದಲ್ಲಿ ಈ ಘಟನೆ ನಡೆದಿದೆ. ಮಗುವಿನ ಕೊಲೆ ಮಾಡಿದ್ದಲ್ಲದೆ, ಶವದಿಂದ ಕಣ್ಣು ಕಿತ್ತಿರುವುದರ ವಿರುದ್ಧ ಖಂಡನೆಗಳು ಹಾಗೂ ದೇಶದಾದ್ಯಂತ ಪ್ರತಿಭಟನೆ ವ್ಯಕ್ತಪಡಿಸಲಾಗಿದೆ.
ಆರೋಪಿಗಳನ್ನು ಪತ್ತೆ ಮಾಡಲು ವಿಶೇಷ ತಂಡ ರಚಿಸಲಾಗಿದೆ. ವಿಶೇಷ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ನೇತೃತ್ವ ವಹಿಸಲಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು, ಹೆಚ್ಚಿನ ಅಧಿಕಾರಿಗಳು ವಿಶೇಷ ತನಿಖಾ ತಂಡದಲ್ಲಿ ಇರುತ್ತಾರೆ ಎಂದು ಉತ್ತರಪ್ರದೇಶದ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದಕುಮಾರ್ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಜಾಹಿದ್ ಮತ್ತು ಅಸ್ಲಂ ಎಂಬುವರನ್ನುಬಂಧಿಸಲಾಗಿದೆ. ಕೊಲೆ ಮಾಡಿದ್ದಲ್ಲದೆ, ಬಾಲಕಿಯ ಮೃತದೇಹವನ್ನು ಕಸದ ತೊಟ್ಟಿಯಲ್ಲಿ ಹಾಕಲಾಗಿತ್ತು. ಜೂನ್ 2 ರಂದು ಈ ಘಟನೆ ನಡೆದಿದ್ದು, ಮೂರು ದಿನಗಳ ನಂತರ ಘಟನೆ ಬೆಳಕಿಗೆ ಬಂದಿತ್ತು. ಮೇ 31ರಂದು ಬಾಲಕಿ ನಾಪತ್ತೆಯಾಗಿದ್ದಳು. ಬಾಲಕಿ ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದರೂಕರ್ತವ್ಯ ಲೋಪ ಎಸಗಿದ ಒಬ್ಬರು ಇನ್ಸ್ ಪೆಕ್ಟರ್ , ಮೂವರು ಸಬ್ ಇನ್ಸ್ ಪೆಕ್ಟರ್, ಒಬ್ಬರು ಪೇದೆಯನ್ನು ಸೇವೆಯಿಂದ ಅಮಾನತುಮಾಡಲಾಗಿದೆ ಎಂದು ಆಲಿಘರ್ ಜಿಲ್ಲಾಎಸ್ಪಿ ಆಕಾಶ್ ಕುಲ್ಹಾರಿ ತಿಳಿಸಿದ್ದಾರೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೇರಿದಂತೆ ದೇಶದ ಹಲವೆಡೆಗಳಿಂದ ನ್ಯಾಯಕ್ಕಾಗಿ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿಒತ್ತಾಯ ಹಾಗೂ ಖಂಡನೆ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.