ನವದೆಹಲಿ: ‘ರಾಷ್ಟ್ರೀಯ ಪಕ್ಷಗಳು ಕಳೆದ 4 ವರ್ಷಗಳಲ್ಲಿ ಉದ್ದಿಮೆಗಳಿಂದ ₹ 956.77 ಕೋಟಿ ದೇಣಿಗೆ ಪಡೆದಿವೆ. ಈ ಪೈಕಿ ಬಿಜೆಪಿ ಅತಿ ಹೆಚ್ಚು ದೇಣಿಗೆ ಪಡೆದ ಪಕ್ಷವಾಗಿದೆ’ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಬಿಡುಗಡೆ ಮಾಡಿರುವ ವರದಿ ಹೇಳಿದೆ.
‘2012–13ರಿಂದ 2015–16ರ ಅವಧಿಯಲ್ಲಿ 2,987 ಉದ್ದಿಮೆಗಳಿಂದ ಬಿಜೆಪಿ ₹ 705.81 ಕೋಟಿ, 167 ಉದ್ದಿಮೆಗಳಿಂದ ಕಾಂಗ್ರೆಸ್ ಪಕ್ಷ ₹ 198.16 ಕೋಟಿ ದೇಣಿಗೆ ಪಡೆದಿವೆ’ ಎಂದು ವರದಿ ತಿಳಿಸಿದೆ. ರಾಷ್ಟ್ರೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯನ್ನು ಆಧರಿಸಿ ಎಡಿಆರ್ ಈ ವರದಿ ಸಿದ್ಧಪಡಿಸಿದೆ.
‘ಎನ್‌ಸಿಪಿ ₹ 50.73 ಕೋಟಿ, ಸಿಪಿಎಂ ₹1.89 ಕೋಟಿ ಮತ್ತು ಸಿಪಿಐ ₹ 18 ಲಕ್ಷ ದೇಣಿಗೆ ಪಡೆದಿವೆ. ₹ 20 ಸಾವಿರಕ್ಕಿಂತ ಹೆಚ್ಚು ದೇಣಿಗೆಯನ್ನು ಯಾರಿಂದಲೂ ಪಡೆದಿಲ್ಲ ಎಂದು ಬಿಎಸ್‌ಪಿ ಘೋಷಿಸಿಕೊಂಡಿದೆ’ ಎಂದು ವರದಿ ತಿಳಿಸಿದೆ.
‘₹ 20 ಸಾವಿರಕ್ಕಿಂತ ಹೆಚ್ಚು ದೇಣಿಗೆ ಪಡೆದ ಮಾಹಿತಿಯನ್ನು ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ. ಈ ರೀತಿಯ ದೇಣಿಗೆಯಿಂದ ರಾಷ್ಟ್ರೀಯ ಪಕ್ಷಗಳು ಪಡೆದಿರುವ ಒಟ್ಟು ಮೊತ್ತ ₹ 1,070.68 ಕೋಟಿಯಾಗಿದೆ. ಇದರಲ್ಲಿ ಶೇಕಡ 89ರಷ್ಟು (₹ 956.77 ಕೋಟಿ) ದೇಣಿಗೆ ಹಣ ಉದ್ದಿಮೆಗಳಿಂದ ಸಂದಾಯವಾಗಿದೆ’ ಎಂದು ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.