ನವದೆಹಲಿ: ಕಳೆದ ಸೆಪ್ಟೆಂಬರ್‌ನಲ್ಲಿ ಭಾರತೀಯ ಸೇನೆ ನಿರ್ದಿಷ್ಟ ದಾಳಿ ನಡೆಸಿದ ಮರುದಿನವೇ ಉದ್ದೇಶಪೂರ್ವಕವಾಗಿ ಗಡಿ ನಿಯಂತ್ರಣಾ ರೇಖೆಯನ್ನು (ಎಲ್‌ಒಸಿ) ದಾಟಿ ಹೋಗಿದ್ದ ಭಾರತೀಯ ಸೈನಿಕನಿಗೆ ಸೇನಾ ನ್ಯಾಯಾಲಯ 89 ದಿನಗಳ ಜೈಲು ಶಿಕ್ಷೆ ವಿಧಿಸಿದೆ.
ಸೈನಿಕ ಚಂದು ಬಾಬುಲಾಲ್ ಚವಾಣ್ ಅವರನ್ನು ಮರಾಠಾ ಲೈಟ್ ಇನ್‌ಫೆಂಟ್ರಿಯ 37 ರಾಷ್ಟ್ರೀಯ ರೈಫಲ್ಸ್‌ನ ತುಕಡಿಯಲ್ಲಿ ನಿಯೋಜಿಸಲಾಗಿತ್ತು. ಈ ತುಕಡಿ ಎಲ್‌ಒಸಿ ಬಳಿ ನಿಯೋಜನೆಗೊಂಡಿದೆ. ನಿರ್ದಿಷ್ಟ ದಾಳಿ ನಡೆದ ಕೆಲವು ಗಂಟೆಗಳ ನಂತರ ಚವಾಣ್ ಎಲ್‌ಒಸಿಯನ್ನು ದಾಟಿ ಅತ್ತ ಹೋಗಿದ್ದರು. ಅವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿತ್ತು.
‘ನಮ್ಮ ಸೈನಿಕನನ್ನು ವಶಕ್ಕೆ ಪಡೆದಿರುವ ಬಗ್ಗೆ ಭಾರತೀಯ ಸೇನೆಯ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರಿಗೆ ಪಾಕಿಸ್ತಾನ ಸೇನೆ ಮಾಹಿತಿ ನೀಡಿತ್ತು. ನಂತರ ಚವಾಣ್ ಅವರನ್ನು 2017ರ ಜನವರಿಯಲ್ಲಿ ನಮಗೆ ಹಸ್ತಾಂತರಿಸಿತ್ತು. ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾಗಿ ಚವಾಣ್ ತಪ್ಪೊಪ್ಪಿಕೊಂಡಿದ್ದಾರೆ. ಚವಾಣ್ ಅವರಿಗೆ ಸೇನಾ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಸೇನೆಯ ಉನ್ನತ ಪ್ರಾಧಿಕಾರವು ದೃಢೀಕರಿಸಬೇಕಿದೆ’ ಎಂದು ಸೇನೆಯ ಮೂಲಗಳು ಹೇಳಿವೆ.
‘ಚಂದು ಬಾಬುಲಾಲ್ ಚವಾಣ್ ಎಂಬ ಭಾರತೀಯ ಸೈನಿಕ, ಉದ್ದೇಶಪೂರ್ವಕವಾಗಿ ಎಲ್‌ಒಸಿ ದಾಟಿ ಇತ್ತ ಬಂದಿದ್ದಾರೆ. ನಂತರ ಪಾಕಿಸ್ತಾನ ಸೇನೆಗೆ ಶರಣಾಗಿದ್ದಾರೆ’ ಎಂದು ಪಾಕಿಸ್ತಾನದ ಗೃಹ ಸಚಿವಾಲಯ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.