ನಾಗೌರ್, ರಾಜಸ್ತಾನ: ಆರ್ಥಿಕವಾಗಿ ಮುಂದುವರಿದ ಸಮುದಾಯಗಳಿಗೆ ಮೀಸಲಾತಿ ನೀಡಬಾರದು ಎಂದು ಆರ್‌ಎಸ್‌ಎಸ್ ಪ್ರತಿಪಾದಿಸಿದೆ. ಹರಿಯಾಣದಲ್ಲಿ ಇತ್ತೀಚೆಗೆ ಜಾಟ್ ಸಮುದಾಯ ಮೀಸಲಾತಿಗೆ ಒತ್ತಾಯಿಸಿ ನಡೆಸಿದ ಭಾರಿ ಪ್ರತಿಭಟನೆ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ಈ ಹೇಳಿಕೆ ನೀಡಿದೆ.
ಹಿಂದುಳಿದ ವರ್ಗಗಳು ಕೋಟಾ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿವೆಯೇ ಎಂಬುದರ ಕುರಿತು ಮತ್ತು ಕೆನೆಪದರದ ಬಗ್ಗೆ ಅಧ್ಯಯನದ ಅಗತ್ಯವಿದೆ ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಹೇಳಿದ್ದಾರೆ. ಮೂರು ದಿನಗಳಿಂದ ಇಲ್ಲಿ ನಡೆಯುತ್ತಿದ್ದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಸಮಾರೋಪದಲ್ಲಿ ಅವರು ಮಾತನಾಡಿದರು. ಮೀಸಲಾತಿಯ ಪುನರ್ ವಿಮರ್ಶೆ ಕುರಿತು ಮೋಹನ್ ಭಾಗವತ್ ಅವರು ಬಿಹಾರ ಚುನಾವಣೆ ವೇಳೆ ನೀಡಿದ್ದ ಹೇಳಿಕೆ ವಿವಾದದ ಸ್ವರೂಪ ಪಡೆದಿತ್ತು.
‘ಹಿಂದೂ ಸಮುದಾಯದ ಸದಸ್ಯರೇ ಜಾತಿ ಆಧಾರಿತ ತಾರತಮ್ಯಕ್ಕೆ ಕಾರಣ. ಸಾಮಾಜಿಕ ನ್ಯಾಯಕ್ಕಾಗಿ ನಾವು ಇದನ್ನು ನಿವಾರಣೆ ಮಾಡಬೇಕಿದೆ. ಸಮಾಜದಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕಿದೆ’ ಎಂದು ಹೇಳಿದರು. ‘ಅಂಬೇಡ್ಕರ್ ಅವರು ಮೀಸಲಾತಿ ಸೌಲಭ್ಯದ ಬಗ್ಗೆ ಪ್ರತಿಪಾದಿಸಿದ್ದು ಸಾಮಾಜಿಕ ನ್ಯಾಯಕ್ಕಾಗಿ. ಇದನ್ನೇ ಮೀಸಲಾತಿಗೆ ಒತ್ತಾಯಿಸುವವರು ಗಮನದಲ್ಲಿ ಇಟ್ಟುಕೊಳ್ಳಬೇಕು’ ಎಂದು ಭಯ್ಯಾಜಿ ತಿಳಿಸಿದರು.
ಸ್ವಯಂಸೇವಕರಿಗಿನ್ನು ಚಡ್ಡಿ ಬದಲಿಗೆ ಪ್ಯಾಂಟ್
ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ತನ್ನ ಸಮವಸ್ತ್ರದಲ್ಲಿ (ಗಣವೇಷ) ಭಾರಿ ಬದಲಾವಣೆ ಮಾಡಿದೆ. ಕಳೆದ 91 ವರ್ಷಗಳಿಂದ ಸಮವಸ್ತ್ರದ ಭಾಗವಾಗಿದ್ದ ದೊಗಲೆ ಚಡ್ಡಿಯನ್ನು ಆರ್‌ಎಸ್‌ಎಸ್ ಈಗ ಕೈಬಿಟ್ಟಿದೆ. ಚಡ್ಡಿಗಳ ಬದಲಿಗೆ ಪ್ಯಾಂಟ್ ಬಳಸಲು ಸಂಘಟನೆ ನಿರ್ಧರಿಸಿದೆ.ಇಲ್ಲಿ ನಡೆಯುತ್ತಿರುವ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
‘ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಹೀಗಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಷಿ ಹೇಳಿದ್ದಾರೆ. ‘ಈಗಿನ ದಿನಗಳಲ್ಲಿ ಪ್ಯಾಂಟ್ ದಿನ ನಿತ್ಯದ ಉಡುಗೆಯಾಗಿದೆ. ಪ್ಯಾಂಟ್‌ಗಳು ಕಂದು ಬಣ್ಣದ್ದಾಗಿರಲಿದೆ. ಕಂದು ಬಣ್ಣದ ಬಟ್ಟೆ ಸುಲಭವಾಗಿ ಲಭ್ಯವಿರುವುದರಿಂದ ಅದನ್ನು ಆಯ್ಕೆ ಮಾಡಲಾಗಿದೆ ಅಷ್ಟೆ. ವ್ಯಾಯಾಮ ಮಾಡಲು ಅನುಕೂಲವಾಗುವಂತೆ ಪ್ಯಾಂಟ್ ಅನ್ನು ವಿನ್ಯಾಸ ಮಾಡಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.
1925ರಲ್ಲಿ ಆರ್ಎಸ್‌ಎಸ್ ಸ್ಥಾಪನೆಯಾದಾಗಿನಿಂದಲೂ ಖಾಕಿ ಬಣ್ಣದ ದೊಗಲೆ ಚಡ್ಡಿ ಅದರ ಸಮವಸ್ತ್ರದ ಭಾಗವಾಗಿತ್ತು. ಸಮವಸ್ತ್ರದ ಅಂಗಿ, ಷೂಗಳು ಬದಲಾದರೂ ಚಡ್ಡಿಯನ್ನು ಹಾಗೇ ಉಳಿಸಿಕೊಳ್ಳಲಾಗಿತ್ತು. 1940ರವರೆಗೂ ಬಳಕೆಯಲ್ಲಿದ್ದ ಖಾಕಿ ಅಂಗಿಯನ್ನು ಕೈಬಿಟ್ಟು ಬಿಳಿ ಅಂಗಿಯನ್ನು ಸ್ವಯಂಸೇವಕರು ತೊಡಲು ಆರಂಭಿಸಿದ್ದರು. ಮೊದಲು ಬಳಕೆಯಲ್ಲಿದ್ದ ಲೆದರ್ ಷೂಗಳನ್ನು ಬದಲಿಸಿ 1973ರಲ್ಲಿ ರೆಕ್ಸಿನ್ ಷೂಗಳನ್ನು ಬಳಕೆಗೆ ತರಲಾಗಿತ್ತು.
ಶಾಖೆಗಳ ಸಂಖ್ಯೆ ಹೆಚ್ಚಳ: 2012ರಿಂದ 2015ರವರೆಗೆ ದೇಶದಾದ್ಯಂತ 10,413 ಹೊಸ ಶಾಖೆಗಳನ್ನು ಆರಂಭಿಸಲಾಗಿದೆ. ಆದರೆ, 2015–2016ನೇ ಸಾಲಿನಲ್ಲಿ ಒಟ್ಟು 5,524 ಹೊಸ ಶಾಖೆಗಳನ್ನು ಆರಂಭಿಸಲಾಗಿದೆ ಎಂದು ಸುರೇಶ್ ಭಯ್ಯಾಜಿ ಜೋಷಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.