ಹೈದರಾಬಾದ್: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಷಯಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ಜತೆ ಮುನಿಸಿಕೊಂಡಿರುವ ತೆಲುಗುದೇಶಂ ಪಕ್ಷ (ಟಿಡಿಪಿ) ಶುಕ್ರವಾರ ಎನ್‌ಡಿಎ ಮೈತ್ರಿಕೂಟದಿಂದ ಹೊರನಡೆಯುವ ನಿರ್ಧಾರ ಪ್ರಕಟಿಸಿದೆ.
‘ನಾವು ಎನ್‌ಡಿಎಯಿಂದ ಹೊರನಡೆಯಲು ನಿರ್ಧರಿಸಿದ್ದೇವೆ. ಎನ್‌ಡಿಎಗೆ ನೀಡಲಾಗಿರುವ ಬೆಂಬಲ ಹಿಂಪಡೆಯಲಾಗಿದೆ. ಮನಸ್ಸು ಬದಲಾಯಿಸಲು ಅವರಿಗೆ (ಎನ್‌ಡಿಎಗೆ) ಸಮಯ ನೀಡಿದ್ದೆವು. ಆದರೆ, ಏನೂ ಪ್ರಯೋಜನವಾಗಲಿಲ್ಲ’ ಎಂದು ಟಿಡಿಪಿಯ ಹಿರಿಯ ನಾಯಕ ಸಿ.ಎಂ. ರಮೇಶ್ ತಿಳಿಸಿದ್ದಾರೆ.
ಎನ್‌ಡಿಎ ಮೈತ್ರಿ ತ್ಯಜಿಸುವ ಬಗ್ಗೆ ಪಕ್ಷದಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟಿಡಿಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರದ ವಿರುದ್ಧ ಅವಿಶ್ವಾಸ ಗೊತ್ತುವಳಿ?: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ನೀಡುವಂತೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಗುರುವಾರ ಲೋಕಸಭೆಯಲ್ಲಿ ನೋಟಿಸ್ ನೀಡಿತ್ತು. ಇದಕ್ಕೆ ಟಿಡಿಪಿ ಬೆಂಬಲ ಸೂಚಿಸಿತ್ತು. ಆದರೆ ಪಕ್ಷದೆ ಸಭೆಯ ಬಳಿಕ, ಕೇಂದ್ರದ ವಿರುದ್ಧ ಪ್ರತ್ಯೇಕವಾಗಿ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗುವುದು ಎಂದು ಟಿಡಿಪಿ ಹೇಳಿತ್ತು.
ಬಜೆಟ್ ನಂತರ ಬಿರುಕುಬಿಟ್ಟಿದ್ದ ಸಂಬಂಧ: ಕೇಂದ್ರ ಬಜೆಟ್‌ನಲ್ಲಿ ಆಂಧ್ರಪ್ರದೇಶವನ್ನು ಕಡೆಗಣಿಸಲಾಗಿದೆ ಎಂದು ಟಿಡಿಪಿ ಆರೋಪಿಸಿತ್ತು. ನಂತರ ಎನ್‌ಡಿಎ ಜತೆಗಿನ ಟಿಡಿಪಿ ಸಂಬಂಧದಲ್ಲಿ ಒಡಕು ಮೂಡಿತ್ತು. ಇದರ ಬೆನ್ನಲ್ಲೇ ನಾಗರಿಕ ವಿಮಾನಯಾನ ಸಚಿವರಾದ ಟಿಡಿಪಿಯ ಅಶೋಕ್ ಗಜಪತಿ ರಾಜು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ವೈ.ಎಸ್. ಚೌಧರಿ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.
[Related]
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.