ಭುವನೇಶ್ವರ: ಫೋನಿ ಚಂಡಮಾರುತಕ್ಕೆ ತತ್ತರಿಸಿರುವ ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಪ್ರತಿ ವರ್ಷ ರಾಜ್ಯ ಒಂದಲ್ಲ ಒಂದು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಲೇ ಇದೆ ಎಂದು ಅವರು ಹೇಳಿದ್ದಾರೆ.
ಫೋನಿ ಚಂಡಮಾರುತದ ನಂತರ ಮೊದಲ ಬಾರಿಗೆ ನೀಡಿರುವಸಂದರ್ಶನದಲ್ಲಿ ಪಟ್ನಾಯಕ್ ಕೇಂದ್ರದ ನೆರವು ಕೋರಿದ್ದಾರೆ.
ರಕ್ಕಸ ಚಂಡಮಾರುತದ ನಂತರ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಮೂಲಸೌಕರ್ಯಕ್ಕೆ ಹಾನಿಯಾಗಿದೆ. ಇದರಿಂದಾಗಿ ಆರ್ಥಿಕ
ಪ್ರಗತಿಗೆ ತೊಂದರೆಯಾಗಲಿದೆ. ಸದ್ಯದ ಮಟ್ಟಿಗೆ ವಿಶೇಷ ಸ್ಥಾನಮಾನ ತುಂಬ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
‘ಕೇಂದ್ರ ಸರ್ಕಾರಕ್ಕೆ ರಾಜ್ಯ ಸಲ್ಲಿಸುತ್ತಿರುವ ಪ್ರಮುಖ ಬೇಡಿಕೆ ಇದಾಗಿದೆ. ಕೇಂದ್ರ ಒಂದು ವೇಳೆ ನೆರವು ನೀಡಿದರೆ ಮೂಲಸೌಕರ್ಯವನ್ನು ತಾತ್ಕಾಲಿಕವಾಗಿ ಪುನರ್ ಸ್ಥಾಪಿಸಲು ಅನುಕೂಲವಾಗಲಿದೆ. ರಾಜ್ಯದ ಬೊಕ್ಕಸದಿಂದ ಇದಕ್ಕಾಗಿ ಅಪಾರ ಪ್ರಮಾಣದ ಹಣ ವ್ಯಯಿಸಬೇಕಾಗಿದೆ’ ಎಂದು ತಿಳಿಸಿದ್ದಾರೆ.
ದೇಶದಲ್ಲೇ ಆರ್ಥಿಕ ಪ್ರಗತಿ ದರವನ್ನು ನಾವು ಉತ್ತಮವಾಗಿ ನಿರ್ವಹಿಸುತ್ತಾ ಬಂದಿದ್ದೇವೆ. ಆರ್ಥಿಕ– ಸಾಮಾಜಿಕ ಸೂಚ್ಯಂಕದಲ್ಲೂ ಸಾಧನೆ ಮಾಡಿದ್ದೇವೆ. ವಿಶೇಷ ಸ್ಥಾನಮಾನ ನೀಡಿದರೆ ಇನ್ನೂ ಸಹಾಯವಾಗಲಿದೆ’ ಎಂದು ಅವರು ಹೇಳಿದ್ದಾರೆ.
ಫೋನಿ ಚಂಡಮಾರುತಕ್ಕೆ ಒಡಿಶಾದಲ್ಲಿ 41 ಮಂದಿ ಮೃತಪಟ್ಟಿದ್ದು, ಈಗಾಗಲೇ ಕೇಂದ್ರ ಸರ್ಕಾರ ₹1000 ಕೋಟಿ ನೆರವಿನ ಭರವಸೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.