ನವದೆಹಲಿ: ಓ.ಎಲ್.ನಾಗಭೂಷಣಸ್ವಾಮಿ ಅವರು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿರುವ ‘ಎ.ಕೆ.ರಾಮಾನುಜನ್ ಅವರ ಆಯ್ದ ಪ್ರಬಂಧಗಳು’ ಕೃತಿಗೆ 2016ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಬಹುಮಾನ ದೊರೆತಿದೆ.
₹50 ಸಾವಿರ ನಗದು ಮತ್ತು ತಾಮ್ರಪ್ರಶಸ್ತಿ ಪತ್ರವನ್ನು ಒಳಗೊಂಡ ಬಹುಮಾನವನ್ನು ಸದ್ಯದಲ್ಲಿಯೇ ನಡೆಯುವ ಸಮಾರಂಭದಲ್ಲಿ ನೀಡಲಾಗುವುದು.
ಪ್ರೊ.ಸಿ.ಎನ್.ರಾಮಚಂದ್ರನ್, ಡಾ.ಪುರುಷೋತ್ತಮ ಬಿಳಿಮಲೆ ಹಾಗೂ ಪ್ರೊ.ಸಿದ್ದಲಿಂಗ ಪಟ್ಟಣಶೆಟ್ಟಿ ಅವರನ್ನು ಒಳಗೊಂಡಿದ್ದ ಆಯ್ಕೆ ಸಮಿತಿಯು ಈ ಕೃತಿಯನ್ನು ಬಹುಮಾನಕ್ಕೆ ಶಿಫಾರಸು ಮಾಡಿತ್ತೆಂದು ಅಕಾಡೆಮಿ ತಿಳಿಸಿದೆ.
ಮನೋಹರ ಗ್ರಂಥಮಾಲಾ 2013ರಲ್ಲಿ ಈ ಕೃತಿಯನ್ನು ಪ್ರಕಟಿಸಿತ್ತು. 2010 ಜನವರಿ ಮತ್ತು 2014ರ ಡಿಸೆಂಬರ್ 31ರ ನಡುವೆ ಪ್ರಕಟವಾದ ಕೃತಿಗಳನ್ನು ಅನುವಾದ ಬಹುಮಾನಕ್ಕೆ ಪರಿಗಣಿಸಲಾಗಿತ್ತು. ಅಕಾಡೆಮಿಯ ಕಾರ್ಯನಿರ್ವಾಹಕ ಮಂಡಳಿಯು ಇಲ್ಲಿ ಸಭೆ ಸೇರಿ ಒಟ್ಟು 22 ಭಾಷೆಗಳ ಕೃತಿಗಳಿಗೆ ಅನುವಾದ ಬಹುಮಾನ ನೀಡುವ ಶಿಫಾರಸುಗಳನ್ನು ಅನುಮೋದಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.