ADVERTISEMENT

ಕಮಲ್‌ನಾಥ್‌ ಬಹುಮತ ಸಾಬೀತು ಮಾಡಲಿ: ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಬಿಜೆಪಿ ಪತ್ರ

ಏಜೆನ್ಸೀಸ್
Published 20 ಮೇ 2019, 16:13 IST
Last Updated 20 ಮೇ 2019, 16:13 IST
   

ಭೋಪಾಲ್‌: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಮುಖಂಡ ಕಮಲ್‌ನಾಥ್‌ ನೇತೃತ್ವದಲ್ಲಿ ಐದು ತಿಂಗಳ ಹಿಂದೆಯಷ್ಟೇ ರಚನೆಯಾಗಿರುವ ಸರ್ಕಾರವನ್ನು ಉರುಳಿಸುವ ಪ್ರಯತ್ನವನ್ನು ಬಿಜೆಪಿ ಆರಂಭಿಸಿದೆ. ‘ಬಹುಮತ ಸಾಬೀತುಪಡಿಸುವ ಸಲುವಾಗಿ ಶೀಘ್ರವೇ ವಿಧಾನಸಭೆಯ ಅಧಿವೇಶನವನ್ನು ಕರೆಯಬೇಕು’ ಎಂದು ವಿರೋಧಪಕ್ಷದ ನಾಯಕ ಗೋಪಾಲ್‌ ಭಾರ್ಗವ್‌ ಸೋಮವಾರ ಒತ್ತಾಯಿಸಿದ್ದಾರೆ.

‘ರೈತರ ಸಾಲ ಮನ್ನಾ ಹಾಗೂ ಇತರ ಪ್ರಮುಖ ವಿಚಾರಗಳನ್ನು ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯುವಂತೆ ನಾನು ರಾಜ್ಯಪಾಲರಿಗೆ ಪತ್ರ ಬರೆಯುತ್ತಿದ್ದೇನೆ. ವಿಧಾನಸಭೆಯಲ್ಲಿ ಸರ್ಕಾರ ಬಹುಮತ ಸಾಬೀತುಪಡಿಸಬೇಕು ಎಂದೂ ನಾವು ಒತ್ತಾಯಿಸುತ್ತಿದ್ದೇವೆ’ ಎಂದು ಗೋಪಾಲ್‌ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್‌ 114 ಹಾಗೂ ಬಿಜೆಪಿ 109 ಸದಸ್ಯರನ್ನು ಹೊಂದಿವೆ. ಬಿಎಸ್‌ಪಿಯ ಇಬ್ಬರು ಶಾಸಕರು, ಎಸ್‌ಪಿಯ ಒಬ್ಬ ಶಾಸಕ ಹಾಗೂ ನಾಲ್ವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಕಾಂಗ್ರೆಸ್‌ ಇಲ್ಲಿ ಸರಳ ಬಹುಮತದ ಸರ್ಕಾರ ರಚಿಸಿದೆ.

ADVERTISEMENT

‘ರಾಜ್ಯದಲ್ಲಿ 27ರಿಂದ 28 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಭಾನುವಾರ ಪ್ರಕಟಗೊಂಡಿರುವ ಬಹುತೇಕ ಎಲ್ಲಾ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ರಾಜ್ಯದ ಕಾಂಗ್ರೆಸ್‌ ಸರ್ಕಾರದ ಮೇಲಿನ ವಿಶ್ವಾಸವನ್ನು ಜನರು ಕಳೆದುಕೊಂಡಿದ್ದಾರೆ ಎಂಬುದೇ ಇದರ ಅರ್ಥ. ಆದ್ದರಿಂದ ಕಮಲ್‌ನಾಥ್‌ ಸರ್ಕಾರದ ಪತನ ಸನ್ನಿಹಿತವಾಗಿದೆ’ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯ್‌ವರ್ಗೀಯ ಹೇಳಿದ್ದಾರೆ. ಮಧ್ಯಪ್ರದೇಶ ಒಟ್ಟಾರೆ 29 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ.

ಇನ್ನೆರಡು ದಿನ ಕಾಯ್ದು ನೋಡಿ

‘ಮತಗಟ್ಟೆ ಸಮೀಕ್ಷೆಗಳನ್ನು ಗಮನದಲ್ಲಿಟ್ಟು ಬಿಜೆಪಿ ಈ ಒತ್ತಾಯ ಮಾಡುತ್ತಿದೆ’ ಎಂದಿರುವ ಕಮಲ್‌ನಾಥ್‌, ‘ಸಮೀಕ್ಷೆಗಳು ಸಂಪೂರ್ಣ ಸುಳ್ಳಾಗಿರುವ ಅನೇಕ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಫಲಿತಾಂಶ ಪ್ರಕಟವಾಗುವ ಗುರುವಾರದವರೆಗೆ ಕಾಯ್ದು, ಆ ನಂತರ ಮಾತನಾಡಿ’ ಎಂದು ಬಿಜೆಪಿಗೆ ಸಲಹೆ ನೀಡಿದ್ದಾರೆ.

ಮಧ್ಯಪ್ರದೇಶದಲ್ಲಿ ಕಮಲ್‌ನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಚನೆಯಾದಾಗಿನಿಂದಲೂ ಬಿಜೆಪಿಯವರು, ‘ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ನೇತೃತ್ವದ ಸರ್ಕಾರ ರಚನೆಯಾದರೆ, ಮಧ್ಯಪ್ರದೇಶ ಸರ್ಕಾರ ಪತನವಾಗಲಿದೆ’ ಎಂಬ ಸೂಚನೆ ನೀಡುತ್ತ ಬಂದಿದ್ದಾರೆ. ಮಾತ್ರವಲ್ಲದೆ ‘ವರ್ತನೆ ಸರಿಯಾಗಿರಲಿ, ಇಲ್ಲದಿದ್ದರೆ ಲೋಕಸಭಾ ಚುನಾವಣೆಯ ನಂತರ ಕಷ್ಟ ಅನುಭವಿಸಬೇಕಾಗುತ್ತದೆ’ ಎಂದು ಕೆಲವು ಅಧಿಕಾರಿಗಳಿಗೆ ಎಚ್ಚರಿಕೆಯನ್ನೂ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.