ಚೆನ್ನೈ: ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜ ಬಾಲಮುರಳಿಕೃಷ್ಣ ಇಂದು ನಿಧನರಾದರು.
ಕರ್ನಾಟಕ ಶಾಸ್ತ್ರೀಯ ಸಂಗೀತಗಾರ, ಗಾಯಕ, ವಾಗ್ಗೇಯಕಾರ, ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ ಮಂಗಳವಾರ ಚೆನ್ನೈನ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಮೂಲತಃ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಶಂಕರಗುಪ್ತಮ್ ನವರಾದ ಬಾಲಮುರಳಿಕೃಷ್ಣ, ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ್ದಾರೆ.
ಪದ್ಮವಿಭೂಷಣ ಬಾಲಮುರಳಿಕೃಷ್ಣ:
ಏಳನೇ ವಯಸ್ಸಿನಲ್ಲಿಯೇ ನಿರಂತರ 3 ಗಂಟೆಗಳ ಸಂಗೀತ ಕಛೇರಿ ನೀಡಿದ್ದ ಬಾಲಮುರಳಿಕೃಷ್ಣ ಆಡುವ ವಯಸ್ಸಿನಲ್ಲಿಯೇ ಸಂಗೀತವನ್ನು ಅರಗಿಸಿಕೊಂಡವರು. ಹದಿನೈದನೆ ವಯಸ್ಸಿಗೆ 72 ಮೇಳಕರ್ಥ ರಾಗಗಳಲ್ಲಿ ಪ್ರಭುತ್ವ ಸಾಧಿಸಿದ್ದರು. ಈ ಎಲ್ಲ ರಾಗಗಳಲ್ಲಿಯೂ ಕೃತಿ ರಚನೆ ಮಾಡಿರುವುದು ವಿಶೇಷ.
ಮೃದಂಗ, ಕಂಜಿರ, ಪಿಟೀಲು ಸೇರಿದಂತೆ ವಿವಿಧ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ಜಗತ್ತಿನಾದ್ಯಂತ 25 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದ ಅವರು ಪಂಡಿತ್ ಭೀಮ್‌ಸೇನ್ ಜೋಷಿ, ಹರಿಪ್ರಸಾದ್ ಚೌರಾಸಿಯಾ ಸೇರಿದಂತೆ ಅನೇಕ ಸಂಗೀತ ದಿಗ್ಗಜರೊಂದಿಗೆ ಜುಗಲ್‌ಬಂದಿ ನಡೆಸಿದ್ದಾರೆ.
ಕೇಳುಗರಿಗೆ ಸಾಹಿತ್ಯವೂ ಭಾವ ದೊಟ್ಟಿಗೆ ತಲುಪುವಂತೆ ಮಾಡುವ ಪ್ರಯತ್ನದಲ್ಲಿ ಯಶಸ್ವಿಯಾದ ಅವರು, ತನ್ನದು ಭಾರತೀಯ ಶಾಸ್ತ್ರೀಯ ಸಂಗೀತ ಎಂದು ಕರೆದುಕೊಂಡಿದ್ದರು. ಕೊನೆಯವರೆಗೂ ನಾನಿನ್ನೂ ಕಲಿಯುತ್ತಿರುವ ಸಂಗೀತ ವಿದ್ಯಾರ್ಥಿ ಎನ್ನುತ್ತಿದ್ದರು. ತ್ಯಾಗರಾಜ ಕೀರ್ತನೆಗಳ ಜೊತೆಗೆ ಭದ್ರಾಚಲ ರಾಮದಾಸು ಮತ್ತು ಅಣ್ಣಮಾಚಾರ್ಯರ ಕೀರ್ತನೆಗಳನ್ನು ಪ್ರಚುರ ಪಡಿಸಿದ ಖ್ಯಾತಿ ಹೊಂದಿದ್ದಾರೆ.
ತೆಲುಗಿನ ಭಕ್ತ ಪ್ರಹ್ಲಾದ ಚಿತ್ರದಲ್ಲಿ ನಾರದ ಪಾತ್ರದಲ್ಲಿ ಅಭಿನಯಿಸಿ ನಟನಾಗಿಯೂ ಗುರುತಿಸಿಕೊಂಡರು. ಕನ್ನಡ, ತೆಲುಗು, ತಮಿಳು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಕನ್ನಡದ ಹಂಸಗೀತೆ ಚಿತ್ರದಲ್ಲಿನ ಹಿನ್ನೆಲೆ ಗಾಯನಕ್ಕೆ 1976ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದರು. ‘ಮುತ್ತಿನಹಾರ’ ಚಿತ್ರದಲ್ಲಿ ಅವರು ಹಾಡಿದ ದೇವರು ಹೊಸೆದ ಪ್ರೇಮದ ದಾರ ಹಾಡು ಸಂಗೀತ ಪ್ರಿಯರನ್ನೂ ಇವತ್ತಿಗೂ ಮಂತ್ರಮುಗ್ದಗೊಳಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.