ನವದೆಹಲಿ: ಪಾಕಿಸ್ತಾನದ ನ್ಯಾಯಾಲಯದಿಂದ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಹೇಗ್‌ನಲ್ಲಿರುವ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತಡೆಯಾಜ್ಞೆ ನೀಡಿದೆ.
‘ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಮುರಿದಿದೆ. ನೌಕಾಪಡೆಯಿಂದ ನಿವೃತ್ತರಾದ ಬಳಿಕ ಜಾಧವ್ ಅವರು ಇರಾನ್‌ನಲ್ಲಿ ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ವೇಳೆ ಪಾಕಿಸ್ತಾನ ಅವರನ್ನು ಅಪಹರಿಸಿದೆ. ಆದರೆ, 2016ರ ಮಾರ್ಚ್ 3ರಂದು ಅವರನ್ನು ಬಲೋಚಿಸ್ತಾನದಲ್ಲಿ ಬಂಧಿಸಿದ್ದಾಗಿ ಪಾಕಿಸ್ತಾನ ಹೇಳಿಕೊಳ್ಳುತ್ತಿದೆ’ ಎಂದು ಭಾರತದ ವಕೀಲರ ತಂಡ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು.
ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಮುಂದಿನ ಆದೇಶ ಹೊರ ಬೀಳುವವರೆಗೂ ಕುಲಭೂಷಣ್ ಜಾಧವ್ ಅವರಿಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಬಾರದು ಎಂದು ಪಾಕಿಸ್ತಾನಕ್ಕೆ ನಿರ್ದೇಶನ ನೀಡಿದೆ.
ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನವು ಅಂತರರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ದೂರಿ ಹಿರಿಯ ವಕೀಲ ಹರೀಶ್ ಸಾಳ್ವೆ ನೇತೃತ್ವದ ವಕೀಲರ ತಂಡವು ಮೇ 8ರಂದು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಭಾರತದ ಪರವಾಗಿ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದು ಭಾರತಕ್ಕೆ ಮೊದಲ ಗೆಲುವು ಎಂದು ಬಣ್ಣಿಸಲಾಗಿದೆ.
‘ಕುಲಭೂಷಣ್ ಜಾಧವ್ ಅವರ ತಾಯಿಯೊಂದಿಗೆ ಮಾತನಾಡಿ ಅಂತರರಾಷ್ಟ್ರೀಯ ನ್ಯಾಯಾಲಯದ ಆದೇಶದ ಬಗ್ಗೆ ತಿಳಿಸಿದ್ದೇನೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.