ADVERTISEMENT

ಕೆರೆಗೆ ಕೊಳಚೆ ನೀರು: ಕ್ರಮಕೈಗೊಳ್ಳಿ

ಕರ್ನಾಟಕ ಸರ್ಕಾರಕ್ಕೆ ಜಾವಡೇಕರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

ನವದೆಹಲಿ: ಕೊಳಚೆ ನೀರು ಮತ್ತು ಕೈಗಾರಿಕಾ ತ್ಯಾಜ್ಯ ಬೆಂಗಳೂರಿನ ಕೆರೆಗಳಿಗೆ ಹರಿಯುವುದನ್ನು ತಡೆಯಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು ಸೂಚಿಸುವುದಾಗಿ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.

ಬೆಂಗಳೂರಿನ ಕೆರೆಗಳ ಪುನಶ್ಚೇತನ ಕುರಿತು ಚರ್ಚಿಸಲು  ಬುಧವಾರ ಸೇರಿದ್ದ, ಬೆಂಗಳೂರಿನ ಶಾಸಕರು ಮತ್ತು ಸಂಸದರ ಸಭೆಯಲ್ಲಿ  ಅವರು ಮಾತನಾಡಿದರು.
ಕೆರೆಗಳಿಗೆ ಕೊಳಚೆ ನೀರು ಹರಿಸುತ್ತಿರುವ ಕೈಗಾರಿಕೆಗಳು ಮತ್ತು ವಸತಿ ಸಮುಚ್ಚಯಗಳ ವಿರುದ್ಧ ತಕ್ಷಣವೇ ಕ್ರಮಕೈಗೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ತಿಳಿಸುವುದಾಗಿ ಜಾವಡೇಕರ್ ಹೇಳಿದರು.

‘ಅಗತ್ಯ ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾಗುವ ಕೈಗಾರಿಕೆಗಳನ್ನು ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯವಾಗಿ ಮುಚ್ಚಿಸಬೇಕು. ಜಲಮೂಲಗಳಲ್ಲಿ ಜಲಮರುಪೂರಣ ಕಾರ್ಯದ ಅಂಗವಾಗಿ ಜಲಮೂಲಗಳ ಒತ್ತುವರಿ ತೆರವಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಪ್ರತಿದಿನ 110 ಕೋಟಿ ಲೀಟರ್ ಕೊಳಚೆ ನೀರು ಉತ್ಪಾದನೆಯಾಗುತ್ತದೆ. ಆದರೆ ನಗರದಲ್ಲಿರುವ ಜಲಶುದ್ಧೀಕರಣ ಘಟಕಗಳ ಸಾಮರ್ಥ್ಯ ಸುಮಾರು 78 ಕೋಟಿ ಲೀಟರ್‌. ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕೇವಲ 48 ಕೋಟಿ ಲೀಟರ್‌ ಕೊಳಚೆ ನೀರನ್ನು ಶುದ್ಧೀಕರಣ ಘಟಕಗಳಿಗೆ ಹರಿಸಲು ಸಾಧ್ಯವಾಗುತ್ತಿದೆ. ಉಳಿದ 65 ಕೋಟಿ ಲೀಟರ್ ಕೊಳಚೆ ನೀರನ್ನು ನೇರವಾಗಿ ಕೆರೆಗಳಿಗೆ ಮತ್ತು ನದಿಗಳಿಗೆ ಹರಿಸಲಾಗುತ್ತಿದೆ.

ಬೆಂಗಳೂರಿನ ವರ್ತೂರು, ಬೆಳ್ಳಂದೂರು, ಮಡಿವಾಳ ಮತ್ತು ಪುಟ್ಟೇನಹಳ್ಳಿ ಕೆರೆಗಳು ತೀರಾ ಕಲುಷಿತಗೊಂಡಿವೆ. ಅಗರದ ಬಳಿ ಇರುವ ಜಲ ಶುದ್ಧೀಕರಣ ಘಟಕಕ್ಕೆ ಪ್ರತಿನಿತ್ಯ ಭಾರಿ ಪ್ರಮಾಣದಲ್ಲಿ ಕೊಳಚೆ ನೀರನ್ನು ಹರಿಸಲಾಗುತ್ತಿದೆ. ಅದರಲ್ಲಿ ಕೇವಲ 20ರಿಂದ 22 ಕೋಟಿ ಲೀಟರ್‌ ಕೊಳಚೆ ನೀರನ್ನು ಮಾತ್ರ ಶುದ್ಧೀಕರಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಸಭೆಯ ಮುಂದಿರಿಸಿದ್ದಾರೆ.

ಬೆಂಗಳೂರಿನ ಕೆರೆಗಳ ಪುನಶ್ಚೇತನ ಕಾರ್ಯದಲ್ಲಿ ಕೇಂದ್ರ ಪರಿಸರ ಸಚಿವಾಲಯ ಭಾಗವಹಿಸುತ್ತದೆ. ಪ್ರತಿ ಕೆರೆಯ ಪುನಶ್ಚೇತನಕ್ಕೆ ₨ 20ರಿಂದ ₨30 ಲಕ್ಷ ಧನಸಾಹಾಯ ಮಾಡಲಾಗುತ್ತದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.