ADVERTISEMENT

ಕೇರಳದಲ್ಲಿ ಮೊದಲ ಲಿಂಗಪರಿವರ್ತಿತರ ಮದುವೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇಷಾನ್‌, ಸೂರ್ಯ

​ಪ್ರಜಾವಾಣಿ ವಾರ್ತೆ
Published 10 ಮೇ 2018, 19:30 IST
Last Updated 10 ಮೇ 2018, 19:30 IST
ತಿರುವನಂತಪುರದಲ್ಲಿ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟ ಇಷಾನ್‌ ಮತ್ತು ಸೂರ್ಯ ಪರಸ್ಪರ ಸಿಹಿ ತಿನ್ನಿಸಿದರು.
ತಿರುವನಂತಪುರದಲ್ಲಿ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟ ಇಷಾನ್‌ ಮತ್ತು ಸೂರ್ಯ ಪರಸ್ಪರ ಸಿಹಿ ತಿನ್ನಿಸಿದರು.   

ತಿರುವನಂತಪುರ: ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದ ಇಬ್ಬರು ಸಂಭ್ರಮದಿಂದ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಒಂದು ಸಮಯದಲ್ಲಿ ಅವನು ಅವಳಾಗಿಯೂ, ಅವಳು ಅವನಾಗಿಯೂ ಇದ್ದರು. ಇವರಿಬ್ಬರೂ ಲಿಂಗಪರಿವರ್ತನೆ ಮಾಡಿಸಿಕೊಂಡಿದ್ದಾರೆ. ಮಾದರಿ ಬದುಕು ಸಾಗಿಸುವ ಆಶಾಭಾವದೊಂದಿಗೆ ಸಮಾಜದಲ್ಲಿ ಲಿಂಗ ಪರಿವರ್ತಿತರ ಬಗ್ಗೆ ಇರುವ ಪೂರ್ವಗ್ರಹಗಳನ್ನು ತೊಡೆದುಹಾಕಲು ಇವರು ಮುಂದಾಗಿದ್ದಾರೆ.

ಲಿಂಗ ಪರಿವರ್ತಿಸಿಕೊಂಡು ಪುರುಷರಾಗಿರುವ ಇಷಾನ್‌ ಕೆ. ಶಾನ್‌ (33) ಮತ್ತು ಲಿಂಗ ಪರಿವರ್ತನೆ ಮಾಡಿಸಿಕೊಂಡು ಮಹಿಳೆಯಾಗಿರುವ ಸೂರ್ಯ (31) ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ADVERTISEMENT

ಇಲ್ಲಿನ ಮನ್ನಂ ಸ್ಮಾರಕ ರಾಷ್ಟ್ರೀಯ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ವಿಶೇಷ ವಿವಾಹ ಕಾಯ್ದೆ ಅಡಿ ಇವರು ಮದುವೆಯಾದರು.

ಕೇರಳದಲ್ಲಿ ಲಿಂಗಪರಿವರ್ತಿಸಿಕೊಂಡವರ ಪ್ರಥಮ ಮದುವೆ ಇದಾಗಿದೆ. ಈ ಇಬ್ಬರು ಮದುವೆಯಾಗುವುದಾಗಿ ಸಾರ್ವಜನಿಕವಾಗಿ ಬಹಿರಂಗಪಡಿಸಿದ ಬಳಿಕ ಚರ್ಚೆಗೂ ಗ್ರಾಸವಾಗಿತ್ತು. 2015ರಲ್ಲಿ ಇಷಾನ್‌ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದರು.

ಒಂದು ವರ್ಷದ ಬಳಿಕ ಸೂರ್ಯ ಸಹ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಪರೂಪದ ಈ ಮದುವೆಗೆ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಲಿಂಗಿಗಳು, ಲಿಂಗಪರಿವರ್ತನೆ ಮಾಡಿಸಿಕೊಂಡವರು (ಎಲ್‌ಜಿಬಿಟಿ) ಸಾಕ್ಷಿಯಾಗಿದ್ದರು. ಇವರ ಹಾಡು ಮತ್ತು ನೃತ್ಯ ಮದುವೆಯ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.

ಉದ್ಯಮಿ ಮತ್ತು ತೃತೀಯ ಲಿಂಗಿಗಳ ಹಕ್ಕುಗಳ ಕಾರ್ಯಕರ್ತರಾಗಿ ಇಷಾನ್‌ ಕಾರ್ಯನಿರ್ವಹಿಸುತ್ತಿದ್ದಾರೆ. ಸೂರ್ಯ ಸಹ ಎಲ್‌ಜಿಬಿಟಿ ಸಮುದಾಯದ ಹಕ್ಕುಗಳ ಕಾರ್ಯಕರ್ತರಾಗಿದ್ದು, ಟಿ.ವಿ. ಕಾರ್ಯಕ್ರಮಗಳ ನಿರೂಪಣೆಗಳ ಮೂಲಕ ಗಮನ ಸೆಳೆದಿದ್ದಾರೆ.

‘ಕೇರಳದಲ್ಲಿ ತೃತೀಯ ಲಿಂಗಿಗಳ ಕುರಿತಾದ ನೀತಿ ಜಾರಿಯಾಗಿದ್ದರೂ ಈ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮುಂದುವರಿದಿವೆ. ಇಂತಹ ಸನ್ನಿವೇಶದಲ್ಲಿ ಈ ವಿವಾಹ ಮಾದರಿಯಾಗಿದ್ದು, ಹೊಸ ಸಂದೇಶ ನೀಡಿದೆ. ಇಷಾನ್‌ ಮತ್ತು ಸೂರ್ಯ ಅವರು ತಾವು ಸಹ ಕೌಟುಂಬಿಕ ಜೀವನ ಸಾಗಿಸಲು ಸಾಧ್ಯ ಎನ್ನುವುದನ್ನು ತೋರಿಸಿಕೊಡಲಿದ್ದಾರೆ. ಇಬ್ಬರ ಕುಟುಂಬಗಳು ಸಹ ಈ ವಿವಾಹವನ್ನು ಬೆಂಬಲಿಸಿವೆ’ ಎಂದು ಎಲ್‌ಜಿಬಿಟಿ ಸಂಘಟನೆಯ ಅಧ್ಯಕ್ಷರಾಗಿರುವ ಪಿ.ಕೆ. ಪ್ರಿಜೀಥ್‌ ಹೇಳಿದರು.

*
ನಮ್ಮ ನಿರ್ಧಾರ ಇತರರಿಗೂ ಉತ್ತೇಜನ. ಕೆಲವರು ಟೀಕಿಸಬಹುದು. ಟೀಕೆಗಳಿಗೆ ಕಿವಿಗೊಡದೆ ಉತ್ತಮ ಜೀವನ ನಡೆಸಲು ಸಾಧ್ಯ ಎನ್ನುವುದನ್ನು ತೋರಿಸಿಕೊಡುತ್ತೇವೆ.
-ಇಷಾನ್‌, ಲಿಂಗಪರಿವರ್ತಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.